ಇತ್ತೀಚೆಗೆ ಬರುತ್ತಿರುವ ಕನ್ನಡ ಸಿನಿಮಾಗಳಿಂದಾಗಿ ಚಂದನವನದ ಚಾರ್ಮ್ ಹೆಚ್ಚಿದೆ. ಇಲ್ಲಿನ ನಿರ್ದೇಶಕರು ಮತ್ತು ನಟರ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ‘ಕಾಂತಾರ’ (Kantara Movie) ಚಿತ್ರವೇ ಇದಕ್ಕೆ ಬೆಸ್ಟ್ ಉದಾಹರಣೆ. ಅದೇ ರೀತಿ ‘ಕೆಜಿಎಫ್: ಚಾಪ್ಟರ್ 2’, ‘777 ಚಾರ್ಲಿ’ ಮುಂತಾದ ಸಿನಿಮಾಗಳು ಕೂಡ ಸಖತ್ ಸದ್ದು ಮಾಡಿವೆ. ಈ ವರ್ಷ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಉತ್ತರ ಭಾರತದಲ್ಲಿ ಅವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸೃಷ್ಟಿ ಆಗಿದೆ. ಅಲ್ಲಿನ ಅನೇಕ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡಲು ಬಾಲಿವುಡ್ ಸ್ಟಾರ್ ಕಲಾವಿದರು ಇಷ್ಟಪಡುತ್ತಿದ್ದಾರೆ. ನಟ ಅನಿಲ್ ಕಪೂರ್ (Anil Kapoor) ಕೂಡ ಈ ಬಗ್ಗೆ ಮಾತನಾಡಿದ್ದಾರೆ.
‘ಪಿಂಕ್ ವಿಲ್ಲಾ’ ನಡೆಸಿದ ಸಂದರ್ಶನದಲ್ಲಿ ಅನಿಲ್ ಕಪೂರ್, ಮೃಣಾಲ್ ಠಾಕೂರ್, ಅಡಿವಿ ಶೇಷ್, ವಿದ್ಯಾ ಬಾಲನ್, ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ‘ಕಾಂತಾರ’ ಸಿನಿಮಾವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಅನಿಲ್ ಕಪೂರ್ ಅವರು ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್ 2, 777 ಚಾರ್ಲಿ
ಅಂದಹಾಗೆ, ಅನಿಲ್ ಕಪೂರ್ ಅವರು ಮೊದಲ ನಟಿಸಿದ್ದೇ ಕನ್ನಡದಲ್ಲಿ. ಮಣಿರತ್ನಂ ನಿರ್ದೇಶನ ‘ಪಲ್ಲವಿ ಅನುಪಲ್ಲವಿ’ ಚಿತ್ರವೇ ಅನಿಲ್ ಕಪೂರ್ ಅವರ ಚೊಚ್ಚಲ ಸಿನಿಮಾ. ನಂತರ ಅವರು ಹಿಂದಿಯಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡರು. ಈಗ ಮತ್ತೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್
‘ಕಾಂತಾರ’ ಚಿತ್ರದ ಬಗ್ಗೆ ಈಗಾಗಲೇ ಅನೇಕ ಸ್ಟಾರ್ ಕಲಾವಿದರು ಮಾತನಾಡಿದ್ದಾರೆ. ರಜನಿಕಾಂತ್, ಪ್ರಭಾಸ್, ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ, ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್, ಹೃತಿಕ್ ರೋಷನ್ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಹಿಂದಿ ಚಿತ್ರರಂಗದ ಹಲವರು ಈ ಸಿನಿಮಾದ ಕುರಿತು ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಕಡೆಗೆ ಎಲ್ಲರೂ ತಿರುಗಿ ನೋಡುವಂತಾಗಿದೆ.
ಇದನ್ನೂ ಓದಿ: Kantara Movie: ‘ಕಾಂತಾರ’ ಚಿತ್ರದ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್
ಗೂಗಲ್ನಲ್ಲಿ ಈ ವರ್ಷ ಜನರು ಅತಿ ಹೆಚ್ಚು ಹುಡುಕಿದ ಭಾರತೀಯ ಸಿನಿಮಾಗಳ ಪಟ್ಟಿ ಇತ್ತೀಚೆಗೆ ಪ್ರಕಟವಾಯಿತು. ಟಾಪ್ 5 ಸಿನಿಮಾಗಳಲ್ಲಿ ಕನ್ನಡದ ಎರಡು ಚಿತ್ರಗಳು (ಕಾಂತಾರ ಮತ್ತು ಕೆಜಿಎಫ್ 2) ಇವೆ ಎಂಬುದು ವಿಶೇಷ. ಕನ್ನಡ ಚಿತ್ರರಂಗದಿಂದ ತಯಾರಾಗುವ ಮುಂಬರುವ ಸಿನಿಮಾಗಳ ಬಗ್ಗೆ ಎಲ್ಲರಿಗೂ ನಿರೀಕ್ಷೆ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.