Home ಬೆಂಗಳೂರು ನಗರ ಕರಗ: ದೇವಸ್ಥಾನದ ಒಳಗೆ ಮಾತ್ರ ಮಹೋತ್ಸಹ ಆಚರಿಸಲು ಅವಕಾಶ

ಕರಗ: ದೇವಸ್ಥಾನದ ಒಳಗೆ ಮಾತ್ರ ಮಹೋತ್ಸಹ ಆಚರಿಸಲು ಅವಕಾಶ

36
0

ಬೆಂಗಳೂರು:

ನಗರದ ಪ್ರತಿಷ್ಠಿತ ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ದೇವಸ್ಥಾನದ ಒಳಗೆ ಮಾತ್ರ ಕರಗ ಆಚರಿಸಲು ಅವಕಾಶ ನೀಡುವ ಬಗ್ಗೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಗೌರವ್ ಗುಪ್ತಾ ರವರು ತಿಳಿಸಿದರು.

ಐತಿಹಾಸಿಕ ಕರಗ ಉತ್ಸವ ನಡೆಸುವ ಸಂಬಂಧ ಇಂದು ಗುಪ್ತಾ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಷ್ಠಿತ ಕರಗ ಉತ್ಸವವನ್ನು ಹಿಂದಿನಿಂದಲೂ ವೈಭವದಿಂದ ಆಚರಿಸಲಾಗುತ್ತಿದೆ. ದೇವಸ್ಥಾನದಲ್ಲಿ ವಿಧಿ-ವಿಧಾನಗಳ ಮೂಲಕ ಪೂಜೆ ಮಾಡುವುದು ಹಾಗೂ ರಾತ್ರಿ ವೇಳೆ ಮರೆವಣಿಗೆ ಮಾಡುವುದು ಪ್ರತೀತಿಯಲ್ಲಿದೆ. ಕಳೆದ ಬಾರಿ ಕೋವಿಡ್ ಸೋಂಕು ಇದ್ದ ಹಿನ್ನೆಲೆ ದೇವಸ್ಥಾನದಲ್ಲಿ ಮಾತ್ರ ಆಚರಣೆ ಮಾಡಲು ಅನುಮತಿ ನೀಡಲಾಗಿತ್ತು. ವ್ಯವಸ್ಥಾಪನಾ ಸಮಿತಿ ಅನ್ವಯ ಕರಗ ಉತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಸದ್ಯ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿರದ ಕಾರಣ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಉತ್ವವ ಮಾಡಬೇಕಾದರೆ ಅದಕ್ಕೆ ಉತ್ಸವ ಸಮಿತಿ ರಚಿಸುವ ಅವಶ್ಯಕವಿರುತ್ತದೆ. ಈ ನಿಟ್ಟಿನಲ್ಲಿ ಉತ್ಸವ ಸಮಿತಿ ರಚಿಸಲು ನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಕೆಲ ನಿಯಮ ಮತ್ತು ನಿರ್ಭಂಧಗಳನ್ನು ವಿಧಿಸಿದ್ದು, ಅದು ಏಪ್ರಿಲ್ ರವರೆಗೆ 20 ರವರೆಗೆ ಅಸ್ತಿತ್ವದಲ್ಲಿರಲಿದೆ. ಕೋವಿಡ್ ಎರಡನೇ ಅಲೆ ಎಲ್ಲರ ಗಮನದಲ್ಲಿದ್ದು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನಿಭಂಧನೆಗಳನ್ನು ವಿಧಿಸುವ ಅಗತ್ಯವಿದೆ. ಈ ಸಂಬಂಧ ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ಜಿಲ್ಲಾಧಿಕಾರಿಗಳು ಹಾಗೂ ಉತ್ಸವ ಸಮಿತಿ ಜೊತೆ ಸಮಾಲೋಚನೆ ಮಾಡಿ ಮತ್ತೊಂದು ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ಕರಗ ದೇವಸ್ಥಾನವು ಮುಜರಾಯಿ ಇಲಾಖೆ ಬಿ ಕೆಟಗರಿ ಅಡಿಯಲ್ಲಿ ಬರಲಿದ್ದು, ಕರಗ ಉತ್ಸವವು ಏಪ್ರಿಲ್ 19 ರಿಂದ ಏಪ್ರಿಲ್ 27 ರವರೆಗೆ ನಡೆಯಲಿದೆ. ಅದಕ್ಕೆ ಉತ್ಸವ ಸಮಿತಿಯನ್ನು ರಚಿಸಿ ಮುಜರಾಯಿ ಇಲಾಖೆಯ ಜೊತೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಕೋವಿಡ್ ಎರಡನೇ ಅಲೆ ಇರುವುದರಿಂದ, ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದರು.

LEAVE A REPLY

Please enter your comment!
Please enter your name here