ಬೆಳಗಾವಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಿದ್ದ 3,542 ಕೋಟಿ ರೂ.ಗಳ ಪೂರಕ ಅಂದಾಜಿನ ಮೊದಲನೆ ಕಂತಿಗೆ ಬುಧವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಕೇಂದ್ರದಿಂದ ರಾಜ್ಯಕ್ಕೆ 73,572 ಕೋಟಿ ರೂ.ತೆರಿಗೆ ಪಾಲು ನಷ್ಟ: ಕೇಂದ್ರ ಸರಕಾರದ 15ನೆ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ರಾಜ್ಯಕ್ಕೆ 2023-24ನೆ ಆರ್ಥಿಕ ವರ್ಷದಲ್ಲಿ 73,572 ಕೋಟಿ ರೂ.ನಷ್ಟವಾಗಿದೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಸವರಾಜರಾಯರಡ್ಡಿ ಆರೋಪಿಸಿದರು.
ಬುಧವಾರ ವಿಧಾನಸಭೆಯಲ್ಲಿ 2023-24ನೆ ಸಾಲಿನ ಪೂರಕ ಅಂದಾಜುಗಳ ಮೊದಲನೆ ಕಂತಿನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ 3.41 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಪೈಕಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 40 ಸಾವಿರ ಕೋಟಿ ರೂ.ಬೇಕಾಗಿದೆ ಎಂದರು.
ಕೇಂದ್ರ ಸರಕಾರ ಹಾಗೂ 15ನೆ ಹಣಕಾಸು ಆಯೋಗದ ಅಸಹಕಾರದ ನಡುವೆಯೂ ರಾಜ್ಯದ ಇತಿಹಾಸದಲ್ಲೆ ಅತಿ ಕಡಿಮೆ ಪ್ರಮಾಣದ 3542 ಕೋಟಿ ರೂ.ಗಳ ಪೂರಕ ಅಂದಾಜುಗಳ ಮೊದಲನೆ ಕಂತನ್ನು ಮುಖ್ಯಮಂತ್ರಿ ಮಂಡಿಸಿದ್ದಾರೆ. ಆ ಮೂಲಕ ಬಜೆಟ್ ಗಾತ್ರವು 3.44 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
14ನೆ ಹಣಕಾಸು ಆಯೋಗ ಜಾರಿಯಲ್ಲಿರುವಾಗ 2018-19ರಲ್ಲಿ ಕೇಂದ್ರ ಸರಕಾರದ ಬಜೆಟ್ ಗಾತ್ರ 21.57 ಲಕ್ಷ ಕೋಟಿ ರೂ.ಗಳು. ಆಗ ರಾಜ್ಯಕ್ಕೆ ಸಿಗುತ್ತಿದ್ದ ತೆರಿಗೆ ಪಾಲು 58,750 ಕೋಟಿ ರೂ.ಗಳು. 2023-24ನೆ ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂ.ಗಳು. 15ನೆ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ರಾಜ್ಯಕ್ಕೆ ಸಿಗುವುದು 50,257 ಕೋಟಿ ರೂ.ಗಳು ಎಂದು ಬಸವರಾಜರಾಯರಡ್ಡಿ ತಿಳಿಸಿದರು.
2018-19 ರಿಂದ 2023-24ನೆ ಸಾಲಿಗೆ ಕೇಂದ್ರದ ಬಜೆಟ್ ದ್ವಿಗುಣ ಆಗಿದೆ. ಆದರೆ, ನಮ್ಮ ರಾಜ್ಯಕ್ಕೆ ಬರುತ್ತಿದ್ದ ತೆರಿಗೆ ಪಾಲು ಕುಂಠಿತವಾಗಿದೆ. ನ್ಯಾಯಸಮ್ಮತವಾಗಿ ಈ ಬಾರಿ ನಮ್ಮ ರಾಜ್ಯಕ್ಕೆ 1,23,572 ಕೋಟಿ ರೂ.ಗಳು ಬರಬೇಕಿತ್ತು. 15ನೆ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯದಿಂದಾಗಿ ನಮಗೆ 73,572 ಕೋಟಿ ರೂ.ತೆರಿಗೆ ಪಾಲು ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ಅನ್ಯಾಯವನ್ನು ಪ್ರತಿಭಟಿಸದಿದ್ದರೆ ಪ್ರತಿ ವರ್ಷ ರಾಜ್ಯವು ಸುಮಾರು ಒಂದು ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಮ್ಮ ಸಂಸದರು ಧ್ವನಿ ಎತ್ತಬೇಕು. ರಾಜ್ಯ ಸರಕಾರದ ಹಣಕಾಸಿನ ಶಿಸ್ತಿನಿಂದಾಗಿ ನಮ್ಮ ಸರಕಾರವು ಪೂರಕ ಅಂದಾಜನ್ನು ಮಂಡಿಸಿದೆ. ನಮ್ಮ ರಾಜ್ಯದ ಪಾಲನ್ನು ಪಡೆಯಲು ಮುಖ್ಯಮಂತ್ರಿ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಬೇಕು ಎಂದು ಬಸವರಾಜರಾಯರಡ್ಡಿ ಮನವಿ ಮಾಡಿದರು.