- ಮೈಸೂರಿನಲ್ಲಿ ಡಿಜಿಟಲ್ ಎಕಾನಮಿ ಮಿಷನ್ ಕಚೇರಿ ಉದ್ಘಾಟನೆ
- 150 ಕೋಟಿ ಡಾಲರ್ ಐಟಿ ರಫ್ತು ಗುರಿ
- ಐಟಿ ರಫ್ತಿನಲ್ಲಿ ದೇಶದಲ್ಲಿ ರಾಜ್ಯವೇ ನಂಬರ್ 1
- 2ನೇ ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ
ಮೈಸೂರು:
ಭಾರತದ ಡಿಜಿಟಲ್ ಉದ್ಯಮದ ವಹಿವಾಟು 2025ರ ವೇಳೆಗೆ 1 ಟ್ರಿಲಿಯನ್ ಆಗಬೇಕೆಂಬುದು ಪ್ರಧಾನಮಂತ್ರಿ ಅವರ ಗುರಿಯಾಗಿದ್ದು. ಆ ವೇಳೆಗೆ ರಾಜ್ಯದ ಡಿಜಿಟಲ್ ಉದ್ಯಮದ ಪಾಲು 300-350 ಶತಕೋಟಿ ಡಾಲರ್ ತಲುಪಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ಐಟಿ/ಬಿಟಿ ಸಚಿವರಾದ ಡಾ.ಸಿ.ಎನ್. ಅಶ್ಬತ್ಥ ನಾರಾಯಣ ಹೇಳಿದರು.
ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದ ಸಿಲ್ವರ್ ಸ್ಪಿರಿಟ್ ಟೆಕ್ನಾಲಜಿ ಪಾರ್ಕ್ ನಲ್ಲಿ ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ʼ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು; ಆರ್ಥಿಕತೆಗೆ ಯಾವುದೇ ಸವಾಲಿದ್ದರೂ ನಿಗದಿತ ಗುರಿಯನ್ನು ತಲುಪಲು ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ ಎಂದರು.
ಐಟಿ ರಫ್ತಿನಲ್ಲಿ ನಂಬರ್ 1:
ಸದ್ಯಕ್ಕೆ ರಾಜ್ಯವು ವಾರ್ಷಿಕ 54 ಶತಕೋಟಿ ಡಾಲರ್ ಮೌಲ್ಯದ ಐಟಿ ರಫ್ತು ವಹಿವಾಟು ನಡೆಸುತ್ತಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಇದರ ಪ್ರಮಾಣವನ್ನೂ ಇನ್ನು ಕೆಲವೇ ವರ್ಷಗಳಲ್ಲಿ 150 ಶತ ಕೋಟಿ ಡಾಲರ್ʼಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದಲ್ಲದೆ, ಒಟ್ಟಾರೆ ಜಿಎಸ್ಡಿಪಿಗೆ ಐಟಿ ವಲಯದ ಪಾಲನ್ನು 30%ಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ, ಬಿಯಾಂಡ್ ಬೆಂಗಳೂರು ಉಪಕ್ರಮದಡಿ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಹಾಗೂ ರಾಜ್ಯದ ಎಲ್ಲ ಪ್ರದೇಶಗಳಲ್ಲೂ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ಎಲ್ಲ ಗುರಿಗಳನ್ನು ಸಾಧಿಸಿಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಬಿಯಾಂಡ್ ಬೆಂಗಳೂರು, ದೇಶದಲ್ಲೇ ಅತ್ಯುತ್ತಮವಾದ ನವೋದ್ಯಮ ನೀತಿ, ಎಂಜಿಯರಿಂಗ್ ಸಂಶೋಧನಾ ಮತ್ತು ಅಭಿವೃದ್ಧಿ ನೀತಿ ಇತ್ಯಾದಿಗಳಿಂದ ಸಾಧ್ಯವಾಗುತ್ತಿದೆ ಎಂದ ಅವರು; ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ದೇಶದಲ್ಲೇ ಮೊತ್ತ ಮೊದಲಿಗೆ ರಾಜ್ಯದಲ್ಲೇ ಜಾರಿ ಮಾಡಲಾಗುತ್ತಿದೆ ಎಂದರು.
ಇದಲ್ಲದೆ, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲವನ್ನು ಒದಗಿಸುವದಕ್ಕೆ ಕ್ರಮ ವಹಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ನೂರೈವತ್ತು ಸರಕಾರಿ ಐಟಿಐಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಉದ್ಯೋಗ ಸೃಷ್ಟಿಗೆ ಒತ್ತು:
ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಬೆಂಗಳೂರು ಮಾತ್ರವಲ್ಲ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗದಂಥ ಎರಡನೇ ಹಂತದ ಹಾಗೂ ಆನಂತರದ ನಗರಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದ ಅವರು, ಈ ನಿಟ್ಟಿನಲ್ಲಿ ಮೈಸೂರು ಮುಂಚೂಣಿ ನಗರವಾಗಿದೆ, ಇತರೆ ಐಟಿ ಕ್ಷಸ್ಟರ್‌ಗಳಿಗೆ ಮೈಸೂರು ಮಾದರಿಯಾಗಲಿದೆ ಮತ್ರವಲ್ಲದೆ ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಹೊಸ ಪದವೀಧರರು ಉದ್ಯೋಗಕ್ಕೆ ಸೇರಲು ಸಿದ್ಧರಾಗಲಿದ್ದಾರೆ. ಅವರೆಲ್ಲರಿಗೂ ಅವಕಾಶ ಸಿಗಲಿದೆ ಎಂದರು.
Mysuru is not only a city of cultural heritage, it is also a destination for innovation, research & technology, envisioned by the great Maharajas.
— Dr. Ashwathnarayan C. N. (@drashwathcn) August 20, 2021
KDEM aims to increase the digital economy contribution to 30% of SGDP.
It will attract investments & create 10 lakh jobs by 2025.
ಮುಂದೆ ಡಿಜಿಟಲ್ ಉದ್ಯೋಗಾವಕಾಶಗಳೇ ಹೆಚ್ಚುತ್ತವೆ. 2030ರ ಹೊತ್ತಿಗೆ ರಾಜ್ಯದ ಡಿಜಿಟಲ್ ಆರ್ಥಿಕತೆಗೆ ಮೈಸೂರು, ಹುಬ್ಬಳ್ಳಿ, ಮಂಗಳೂರು ಕ್ಲಸ್ಟರ್‌ಗಳಿಂದ ಶೇ 5% ಕೊಡುಗೆ ದೊರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ರಾಜವಶಂಸ್ಥರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಂಸದ ಪ್ರತಾಪ್ ಸಿಂಹ, ಸ್ಟಾರ್‌ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇಎಸ್ ರಮಣ ರೆಡ್ಡಿ, ಇದೇ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.