Home ಶಿಕ್ಷಣ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ವರ್ಷವೇ 8,500 ಸ್ಮಾರ್ಟ್‌ಕ್ಲಾಸ್‌ ರೂಂ ಅಭಿವೃದ್ಧಿ: ಡಿಸಿಎಂ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ವರ್ಷವೇ 8,500 ಸ್ಮಾರ್ಟ್‌ಕ್ಲಾಸ್‌ ರೂಂ ಅಭಿವೃದ್ಧಿ: ಡಿಸಿಎಂ

82
0
bengaluru

ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ವಿತರಿಸಿದ ‌ಅಶ್ವತ್ಥನಾರಾಯಣ

ಬೆಂಗಳೂರು:

ಕೋವಿಡ್‌ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ರಾಜ್ಯ ಸರಕಾರವು ಡಿಜಿಟಲ್‌ ಕಲಿಕೆಗೆ ಹೆಚ್ಚು ಒತ್ತು ನೀಡಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಶನಿವಾರ ಮಲ್ಲೇಶ್ವರದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಕೆಲ ದಿನಗಳಲ್ಲೇ ರಾಜ್ಯದ ಉನ್ನತ ಶಿಕ್ಷಣ ವಿಭಾಗದಲ್ಲಿರುವ 8,500 ತರಗತಿ ಕೊಠಡಿಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಪೈಕಿ 2,500 ಕೊಠಡಿಗಳನ್ನು ಈಗಾಗಲೇ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಾಲೇಜಿನಲ್ಲೂ ಎಲ್ಲ ತರಗತಿ ಕೊಠಡಿಗಳನ್ನೂ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

bengaluru
Karnataka aims at 8500 Smart Classrooms this year DyCM1

ಇದಕ್ಕೆ ಪೂರಕವಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ 1.10 ಲಕ್ಷ ಲ್ಯಾಪ್‌ಟಾಪ್‌ಗಳನ್ನು ಎಲ್ಲ ಪದವಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು. ಅದಕ್ಕಾಗಿ 330 ಕೋಟಿ ರೂ. ಖರ್ಚು ಮಾಡಲಾಗಿತ್ತು. ಅದೇ ರೀತಿ ಈ ಶೈಕ್ಷಣಿಕ ವರ್ಷದಲ್ಲಿ 1.60 ಲಕ್ಷದಷ್ಟು ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಡಿಜಿಟಲ್‌ ಪರಿಕರಗಳನ್ನು ಕೊಟ್ಟು ಸುಮ್ಮನಾಗಲಿಲ್ಲ ಸರಕಾರ. ಬದಲಿಗೆ ಕಲಿಕಾ ವ್ಯವಸ್ಥೆಯನ್ನು ರೂಪಿಸಿತು. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದ ಕ್ರಾಂತಿಕಾರಿ ವ್ಯವಸ್ಥೆ ಇದು. ಯಾವುದೇ ಖಾಸಗಿ ವಿವಿಗೂ ರೂಪಿಸಲು ಸಾಧ್ಯವಾಗದ ಉಪಕ್ರಮ ಇದು ಎಂದರು ಡಿಸಿಎಂ.

ಅತ್ಯುತ್ತಮ ಕಂಟೆಂಟ್‌ ಜತೆಗೆ, ಪರಿಣಾಮಕಾರಿ ಕಲಿಕೆ ಎಲ್ಲ ಆಯಾಮಗಳಲ್ಲೂ ಸಹಕಾರಿಯಾದ ವ್ಯವಸ್ಥೆ ಇದು. 3.5 ಲಕ್ಷ ತರಗತಿಗಳನ್ನು ನಮ್ಮದೇ ಬೋಧಕರು ಅಪ್‌ಲೋಡ್‌ ಮಾಡಿದ್ದಾರೆ.  ಇಂಥ ಅದ್ಭುತ ಯೋಜನೆಗೆ ಸರಕಾರ ಖರ್ಚು ಮಾಡಿದ್ದು ಕೇವಲ 4 ಕೋಟಿ ರೂ. ಮಾತ್ರ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಇಂಥ ಉತ್ತಮ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಎಸ್.ಪ್ರತಿಮಾ‌, ಐಕ್ಯೂಎಸಿ ಸಂಚಾಲಕ ಡಾ.ಸಿ.ಸ್ವಾಮಿನಾಥನ್‌ ಹಾಗೂ ನ್ಯಾಕ್‌ ಸಂಚಾಲಕಿ ಪಿ.ಎನ್.‌ಜಯಂತಿ ಹಾಗೂ ಪ್ರಾಧ್ಯಾಪಕರಾದ ರವಿಶಂಕರ್‌, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here