Home ಬೆಂಗಳೂರು ನಗರ ರಾಜ್ಯದಲ್ಲಿ ಉದ್ಯಮಶೀಲತೆ ವಿಸ್ತರಣೆ ನಮ್ಮ ಗುರಿ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಉದ್ಯಮಶೀಲತೆ ವಿಸ್ತರಣೆ ನಮ್ಮ ಗುರಿ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

45
0
Karnataka aims to expand entrepreneurship in state: Chief Minister

ಬೆಂಗಳೂರು:

ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಸೇರಿದಂತೆ ರಾಜ್ಯಾದ್ಯಂತ ಉದ್ಯಮ ವಿಸ್ತರಣೆ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದ್ದ ಸಿ.ಐ.ಐ ವಾರ್ಷಿಕ ಸಭೆ- ಇಂಡಿಯಾ @75 ನಲ್ಲಿ ವರ್ಚುವಲ್ ಆಗಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎನಿಸಿದೆ. ಸ್ವಾತಂತ್ರ್ಯ ನಂತರದಲ್ಲಿ ಕೌಶಲ್ಯ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ವಿದೇಶಿ ಸಹಯೋಗಕ್ಕೆ ಅತ್ಯಂತ ಭದ್ರವಾದ ಬುನಾದಿಯನ್ನು ಹಾಕಲಾಗಿದೆ. ಇಡೀ ರಾಜ್ಯದಲ್ಲಿ ಉದ್ಯಮಶೀಲತೆಯನ್ನು ವಿಸ್ತರಿಸುವುದು ನಮ್ಮ ಸರ್ಕಾರದ ಗುರಿ ಎಂದುನಾವರು ಹೇಳಿದರು.

ರಾಜ್ಯವನ್ನು ಬೆಳವಣಿಗೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಒಟ್ಟಾರೆ ಸಂಪನ್ಮೂಲಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲಾಗುವುದು. ವ್ಯವಸ್ಥೆಗಿಂತ ರಾಜ್ಯದ ಜನರು ಶ್ರೀಮಂತವಾಗಿರಬೇಕು ಎನ್ನುವುದು ನನ್ನ ಆಶಯ. ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲತೆಯ ಮೂಲಕ ಮಾನವ ಸಂಪನ್ಮೂಲವನ್ನು ಸಶಕ್ತಗೊಳಿಸಬೇಕು. ಪ್ರಾದೇಶಿಕ ಅಸಮಾನತೆಯ ನಿವಾರಣೆ ನಮ್ಮ ಆದ್ಯತೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ರಫ್ತು ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರಬೇಕು. ಇದಕ್ಕಾಗಿ ಉತ್ತಮ ಗುಣಮಟ್ಟದ ರಫ್ತು ಕೇಂದ್ರಿತ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು. ನೂತನ ಕೈಗಾರಿಕಾ ನೀತಿ, ಕಾಯ್ದೆಗಳನ್ನು ಸರಳೀಕರಿಸಿದ್ದು ರಾಜ್ಯ ದಲ್ಲಿ ಹೂಡಿಕೆಯನ್ನು ಸುಲಭವಾಗಿಸಿದೆ. ಕೋವಿಡ್ ಹೊರತಾಗಿಯೂ ರಾಜ್ಯದ ಆರ್ಥಿಕ ಸ್ಥಿತಿ ಸ್ಥಿರವಾಗಿದ್ದು, ಕೈಗಾರಿಕಾ ಮತ್ತು ಸೇವಾ ವಲಯದಲ್ಲಿ ಹೂಡಿಕೆ ಮಾಡುವಂತೆ ವಿವಿಧ ಕಂಪನಿಗಳಿಗೆ ಬೊಮ್ಮಾಯಿ ಆಹ್ವಾನ ನೀಡಿದರು.

ಸಿ.ಐ.ಐ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ, ಉದ್ಯಮಿಗಳಾದ, ಅಜೀಮ್ ಪ್ರೇಮ್ ಜಿ, ಕಿರಣ್ ಮಜುಂದಾರ್ ಷಾ, ಹಾಗೂ ಸಿ.ಐ.ಐ.ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here