ಬೆಂಗಳೂರು:
ಈ ಬಾರಿ ಬೆಂಗಳೂರಿನಲ್ಲಿಯೇ ವಿಧಾನಮಂಡಲ ಅಧಿವೇಶನ ನಡೆಸಲು ನಡೆಸಲು ಸರ್ಕಾರ ತೀರ್ಮಾನಿಸಿದೆ.
ಸೆಪ್ಟೆಂಬರ್ 13 ರಿಂದ 23 ರವರೆಗೆ 10 ದಿನಗಳ ಕಾಲ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಸಭೆಯಲ್ಲಿ ಚರ್ಚಿಸಲಾದ ಮತ್ತು ನಿರ್ಣಯಿಸಲಾದ ವಿಷಯಗಳು ಇಂತಿವೆ: ಆರೋಗ್ಯ ಪೂರೈಕೆದಾರರ ಹುದ್ದೆಗಳನ್ನು ಸೃಷ್ಟಿಸುವುದು ಮತ್ತು ರೋಸ್ಟರ್ ಮೆರಿಟನ್ನು ಗುತ್ತಿಗೆ ಆಧಾರದಲ್ಲಿ ಮೂರು ವರ್ಷದವರೆಗೆ ನೇಮಕ ಮಾಡಿಕೊಳ್ಳುವುದು, ಆರ್ ಜಿಯುಜಿಎಸ್ ಸಂಯೋಜಿತ ಕೋರ್ಸ್ ನಡಿ ನರ್ಸಿಂಗ್ ಓದಿರುವ ವಿದ್ಯಾರ್ಥಿಗಳನ್ನು ಕೂಡ ಇದರಡಿ ನೇಮಕಾತಿ ಮಾಡಲಾಗುವುದು.
ಆರೋಗ್ಯ ಇಲಾಖೆಯ 1ರಿಂದ 5 ಹಂತದ ಕಾರ್ಯಕ್ರಮಗಳನ್ನು ಸೇರಿಸಲಾಗುತ್ತದೆ. ಪರಿಕರ ಒದಗಿಸಲು ಲಭ್ಯ ಮಾಡಿಕೊಡುತ್ತೇವೆ. ಕಟ್ಟಡ ಲಭ್ಯವಿದ್ದರೆ ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ನಿಗದಿಪಡಿಸುತ್ತೇವೆ ಎಂದು ಸಚಿವರು ಹೇಳಿದರು.
ಕಲಬುರ್ಗಿ ಜಿಲ್ಲೆಯ ಮಿನಿ ವಿಧಾನಸೌಧಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದಕ್ಕೆ ಇನ್ನೂ 2.27 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಲು ನಿರ್ಧರಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 9 ಲಕ್ಷ ಟನ್ ತ್ಯಾಜ್ಯ ಹೊರಬರುತ್ತಿರುವ ಹೈಕೋರ್ಟ್ ನ ಆದೇಶದ ಪ್ರಕಾರ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ ಸರ್ಕಾರ ತ್ಯಾಜ್ಯ ವಿಲೇವಾರಿ ಕಾರ್ಯ ಮಾಡಲಿದೆ.
ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮ: 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಂಗವಾಗಿ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರಗಳನ್ನು ಸ್ವಚ್ಛ ಮತ್ತು ಸುಂದರಗೊಳಿಸಲು 75 ಕೋಟಿ, ಆರೋಗ್ಯ ಇಲಾಖೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಲಿದೆ.
ಸಭೆಯಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸುವ ಬಗ್ಗೆ ವಿಶೇಷ ಒತ್ತು ನೀಡಲಾಯಿತು. ರಾಜ್ಯದಲ್ಲಿ ಸದ್ಯ ಕೋವಿಡ್-19 ನಿಯಂತ್ರಣದಲ್ಲಿರುವುದರಿಂದ ಮೂರನೇ ಅಲೆ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ. ಸಚಿವ ಆನಂದ್ ಸಿಂಗ್ ಗೈರು ಬಗ್ಗೆ ಕೂಡ ಚರ್ಚೆ ಬಂದಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಕೂಡ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.