Home ಬೆಳಗಾವಿ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಅನುದಾನ, ಬಿಗಿ ನಿಯಮಗಳ ಸಡಿಲಿಕೆಗೆ ಭರವಸೆ : ಕೋಟ ಶ್ರೀನಿವಾಸ ಪೂಜಾರಿ

ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಅನುದಾನ, ಬಿಗಿ ನಿಯಮಗಳ ಸಡಿಲಿಕೆಗೆ ಭರವಸೆ : ಕೋಟ ಶ್ರೀನಿವಾಸ ಪೂಜಾರಿ

49
0

ಬೆಳಗಾವಿ ಸುವರ್ಣಸೌಧ:

ರಾಜ್ಯದ ಧಾರ್ಮಿಕ ಸ್ಮಾರಕಗಳೂ ಒಳಗೊಂಡಂತೆ ಎಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಮಾತ್ರವಲ್ಲದೆ, ಬಿಗಿ ನಿಯಮಗಳ ಸಡಿಲಿಕೆಗೂ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ವಿಧಾನ ಪರಿಷತ್‍ನಲ್ಲಿ ಭರವಸೆ ನೀಡಿದರು.

ಸದಸ್ಯೆ ಡಾ ತೇಜಸ್ವಿನಿ ಗೌಡ ಅವರು ಕೆಳದಿ ಸಾಮ್ರಾಜ್ಯದ ನಾಲ್ಕು ರಾಜಧಾನಿಗಳಾದ ಕೆಳದಿ, ಇಕ್ಕೇರಿ, ಬಿದನೂರು (ನಗರಕೋಟೆ) ಹಾಗೂ ಕವ ದುರ್ಗದ ಸ್ಮಾರಕಗಳ ದುರಸ್ತಿ, ನಿರ್ವಹಣೆಗೆ ಸಂಬಂಧಿಸಿದಂತೆ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರ ಪರವಾಗಿ ಸಚಿವರು ಉತ್ತರಿಸಿದರು.

ಸ್ಮಾರಕಗಳ ಸಂರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಅದಕ್ಕಿಂತ ಹೆಚ್ಚಾಗಿ ಬಿಗಿಯಾದ ನಿಯಮಗಳಿಂದ ಕೆಲ ಸಮಸ್ಯೆಗಳು ಎದುರಾಗಿವೆ ಎಂಬ ಆಂಶವನ್ನು ಸದನದಲ್ಲಿ ಒಪ್ಪಿಕೊಂಡ ಸಚಿವರು ಪುರಾತತ್ವ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಅನುದಾನ ಒದಗಿಸಲಾಗುವುದು. ಸ್ಮಾರಕಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಕಠಿಣ ನಿಯಮಗಳನ್ನು ಶೀಘ್ರದಲ್ಲಿಯೇ ಸಡಿಲಿಸಲು ಕ್ರಮವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಜ್ಯ ಪುರಾತತ್ವ ಇಲಾಖೆಗೆ ಕಳೆದ 20 ವರ್ಷಗಳಲ್ಲಿ 12 ನೇ ಹಣಕಾಸು ಯೋಜನೆಯಡಿ 2006 ರಿಂದ 2010 ರವರೆಗೆ 22.50 ಕೋಟಿ ರೂ. ಮತ್ತು 13 ನೇ ಹಣಕಾಸು ಯೋಜನೆಯಡಿ 2012-2015 ರವರೆಗೆ 100 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯವು ಬಿಡುಗಡೆ ಮಾಡಿದೆ ಎಂದು ಸಚಿವರು ವಿವರಿಸಿದರು.

ಹನ್ನೆರಡನೇ ಹಣಕಾಸು ಯೋಜನೆಯಡಿ 63 ಸ್ಮಾರಕಗಳು, ಒಂದು ಪುರಾತತ್ವ ನೆಲೆಯ ಅಭಿವೃದ್ಧಿ ಹಾಗೂ 13 ವಸ್ತು ಸಂಗ್ರಹಾಲಯಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಹದಿಮೂರನೇ ಹಣಕಾಸು ಯೋಜನೆಯಡಿ 135 ಸ್ಮಾರಕಗಳ ಸಂರಕ್ಷಣೆ ಕೈಗೊಳ್ಳಲಾಗಿದೆ ಎಂದು ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದರು.

ಅಲ್ಲದೆ, 2018-19 ರಿಂದ 2020-21 ರ ವರೆಗೆ ಶಿವಪ್ಪ ನಾಯಕ ಕೋಟೆ, ನಗರಕ್ಕೆ 25.70 ಲಕ್ಷ ರೂ , ಕೋಟೆ ಹೊರಗಡೆಯ ಅರಮನೆ ಪ್ರದೇಶ, ನಗರಕ್ಕೆ 16.55 ಲಕ್ಷ ರೂ , ಕೆಳದಿಯ ರಾಮೇಶ್ವರ ದೇವಸ್ಥಾನಕ್ಕೆ 37.09 ಲಕ್ಷ ರೂ, ಇಕ್ಕೇರಿಯ ಅಘೋರೇಶ್ವರ ದೇವಸ್ಥಾನಕ್ಕೆ 7.50 ಲಕ್ಷ ರೂ, ಕವಲೆ ದುರ್ಗದ ಕೋಟೆ ಸ್ಮಾರಕಗಳಿಗೆ 49.46 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಈಗಾಗಲೇ ಎಲ್ಲಾ ಅಗತ್ಯ ಕ್ರಮವಹಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರ ಗ್ರಾಮದಲ್ಲಿ ಶಿವಪ್ಪ ನಾಯಕರ ಮತ್ತು ವಂಶಸ್ಥರ ಸಮಾಧಿಗಳ ಸಂರಕ್ಷಣೆ ಮತ್ತು ಹಾಗೂ ಇದರ ಸುತ್ತಲೂ ನೆಲಹಾಸು, ಮಾಹಿತಿ ಫಲಕ ಹಾಗೂ ಸರಳು ಸಂಪರ್ಕ ಬೇಲಿ ( ಚೈನ್ ಲಿಂಕ್ ಫೆನ್ಸಿಂಗ್ ) ಅಳವಡಿಸುವ ಕಾಮಗಾರಿಯನ್ನು 2021-22 ನೇ ಸಾಲಿನಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ 27 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಇದೇ ಆರ್ಥಿಕ ಸಾಲಿನಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು.

ಇಕ್ಕೇರಿಯ ಅಘೋರೇಶ್ವರ ದೇವಸ್ಥಾನದ ಗರ್ಭಗುಡಿ ಛಾವಣಿ ಸೋರಿಕೆಯ ದುರಸ್ತಿ ಕಾರ್ಯವನ್ನು ಮುಂದಿನ ಮಾರ್ಚ್ ಮಾಸಾಂತ್ಯದ ವೇಳೆಗೆ ಪ್ರಾರಂಭಿಸಲಾಗುವುದು ಎಂದು ಅವರು ಸದನಕ್ಕೆ ಭರವಸೆ ನೀಡಿದರು.

LEAVE A REPLY

Please enter your comment!
Please enter your name here