ಪ್ರಧಾನಿ ಮೋದಿ ಸಾರ್ವಜನಿಕ ಸೇವೆಗೆ 25 ವರ್ಷ: ಸೆ.17ರಿಂದ ಕರ್ನಾಟಕದಾದ್ಯಂತ ಬಿಜೆಪಿ ತಿಂಗಳ ಅಭಿಯಾನ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಿತ ಆಡಳಿತವನ್ನು ಗುರುತಿಸಿ ಸೆಪ್ಟೆಂಬರ್ 17ರಿಂದ ಒಂದು ತಿಂಗಳ ಕಾಲ ರಾಜ್ಯಾದ್ಯಂತ ವಿವಿಧ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಅಭಿಯಾನದ ಮೂಲಕ ಮೋದಿ ಅವರ ಸಾಧನೆಗಳನ್ನು ಜನರ ನಡುವೆ ಕೊಂಡೊಯ್ಯಲಾಗುವುದು ಎಂದರು. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ‘ಆಶೀರ್ವಾದದ ದೀಪ’ ಪ್ರಜ್ವಲನೆ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.
ಮೋದಿ ಅವರ ಸಾಧನೆಗಳು ಹಾಗೂ 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದು ವಿಜಯೇಂದ್ರ ಹೇಳಿದರು. ಅಭಿಯಾನದ ಪೂರ್ವಸಿದ್ಧತೆಯಾಗಿ ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಹಾಗೂ ಮಹಾರಾಷ್ಟ್ರ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೇಲಾರ್ ಅವರು ಅಭಿಯಾನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಸೆಪ್ಟೆಂಬರ್ 17ರಿಂದ ರಾಜ್ಯಾದ್ಯಂತ ಅಭಿಯಾನ ಆರಂಭವಾಗಲಿದೆ ಎಂದು ಅವರು ಹೇಳಿದರು.
