13 ಆಯವ್ಯಯಗಳಲ್ಲೂ ಬಸವಣ್ಣ, ಅಂಬೇಡ್ಕರ್, ಲೋಹಿಯಾ, ದೇವರಾಜ ಅರಸರ ನೆರಳು
14ನೇ ದಾಖಲೆಯ ಆಯವ್ಯಯ ಮಂಡಿಸುತ್ತಿರುವ ಚರಿತ್ರಾರ್ಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಇಟ್ಟ ದಿಟ್ಟ ಹೆಜ್ಜೆಗಳ ಹಿನ್ನೋಟ
ಬೆಂಗಳೂರು:
ಕಾಯಕ ಅಂದರೆ ಉತ್ಪತ್ತಿ (production), ದಾಸೋಹ ಅಂದರೆ (distribution) ಎನ್ನುವ ಮಾತನ್ನು ಕಳೆದ ಒಂದು ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಸಾರ್ವಜನಿಕ ಭಾಷಣಗಳಲ್ಲಿ ಮತ್ತೆ ಮತ್ತೆ ಹೇಳಿದ್ದಾರೆ.
ಕಳೆದ 25 ದಿನಗಳಿಂದ 14 ನೇ ಆಯವ್ಯಯ ಮಂಡನೆಗೆ ತಡೆರಹಿತ ಸಭೆಗಳನ್ನು ನಡೆಸುತ್ತಾ ಹಣಕಾಸು ಇಲಾಖೆಯನ್ನು ಸಜ್ಜುಗೊಳಿಸುತ್ತಿರುವ ಮುಖ್ಯಮಂತ್ರಿಗಳ ಬಾಯಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳು ಮತ್ತೆ ಮತ್ತೆ ಬರುತ್ತಿರುವುದು ಕಾಕತಾಳೀಯ ಅಲ್ಲ.
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮಂಡಿಸಿದ ಮೊದಲ ಆಯವ್ಯಯದಿಂದ ಹಿಡಿದು ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 2018-19ರ ತಮ್ಮ 13ನೇ ಆಯವ್ಯಯದಲ್ಲೂ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಮತ್ತು ದೇವರಾಜ ಅರಸರ ನೆರಳು ಸ್ಪಷ್ಟವಾಗಿ ದಾಖಲಾಗಿವೆ.
1995-96 ರಿಂದ 2013-14ರ ವರೆಗೂ ಮಂಡಿಸಿದ ಏಳು ಆಯವ್ಯಯಗಳಲ್ಲಿ ಸಮಾಜವಾದಿ ಆಶಯಗಳು, ಚಿಂತನೆಗಳು, ಕಾಳಜಿಗಳು ಎದ್ದು ಕಾಣಿಸಿದರೆ, 2013-14 ರಿಂದ 2018-19ರ ವರೆಗಿನ ಆರು ಆಯವ್ಯಯಗಳಲ್ಲಿ ಆಗಷ್ಟೆ ಎದೆ ಎತ್ತಿದ್ದ ಅಹಿಂದ ಚಳಚಳಿಯ ತತ್ವ ಮತ್ತು ಆದರ್ಶಗಳು ಸಿದ್ದರಾಮಯ್ಯರ ಕೈ ಹಿಡಿದು ನಡೆಸಿದ್ದಕ್ಕೆ ಸ್ಪಷ್ಟ ಕುರುಹುಗಳು ಮತ್ತು ದಾಖಲೆಗಳಿವೆ.
ಈ ಎರಡು ಹಂತದ ಆಯವ್ಯಯಗಳಲ್ಲಿ ಒಟ್ಟು ಜನಸಂಖ್ಯೆಯ ಶೇ 85 ರಷ್ಟಿರುವ ಅಹಿಂದ ಮತ್ತು ಶೂದ್ರ ಸಮುದಾಯಗಳಿಗೆ ಹಂಚಿಕೆ ಮಾಡುತ್ತಲೇ ಕೃಷಿ, ಕೈಗಾರಿಕೆ, ಸೇವಾ ವಲಯ ಮತ್ತು ಕೌಶಲ್ಯಾಭಿವೃದ್ಧಿಗೂ ಹೆಚ್ಚಿನ ಪ್ರಮಾಣದ ಹಣ ನೀಡಿರುವುದು ಬಸವಣ್ಣನವರ ಸರ್ವರಿಗೂ ಸಮಪಾಲು ಎನ್ನುವ ಆಶಯವನ್ನು ಪಾಲಿಸಿರುವುದಕ್ಕೆ ಸಾಕ್ಷಿಯಾಗಿದೆ.
ಈಗ ಅತ್ಯಂತ ಸವಾಲಿನ 14ನೇ ಆಯವ್ಯಯದಲ್ಲಿ ಎಲ್ಲಾ ಜಾತಿ, ಜನವರ್ಗಗಳ ಬದುಕಿನ ಸಂಕಷ್ಟಗಳಿಗೆ ತಕ್ಕ ಮಟ್ಟಿನ ಸಮಾಧಾನ ನೀಡುವ ಐದು ಗ್ಯಾರಂಟಿಗಳ ಪ್ರಭಾವ ದಟ್ಟವಾಗಿರುತ್ತದೆ ಎನ್ನುವುದು ಮುಖ್ಯಮಂತ್ರಿಗಳ ಕಳೆದ ಒಂದು ವಾರದ ಹೇಳಿಕೆಗಳಿಂದಲೇ ಅಂದಾಜಿಸಬಹುದು.
ಇದುವರೆಗಿನ 13 ಆಯವ್ಯಯಗಳಲ್ಲಿ ಕೇಂದ್ರೀಕರಿಸಿರುವ ರಾಜಸ್ವ ಮತ್ತು ಮಾಡಿರುವ ವೆಚ್ಚಗಳೆಲ್ಲವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಅದರಲ್ಲೂ 2014-15 ರಿಂದ 2018-19ರ ವರೆಗೂ 127 ಕೋಟಿಯಿಂದ 910 ಕೋಟಿವರೆಗೂ ರಾಜಸ್ವ ಹೆಚ್ಚುವರಿಯಾಗಿರುವುದು ಸಿದ್ದರಾಮಯ್ಯ ಅವರು ಎಲ್ಲೂ ಆರ್ಥಿಕ ಶಿಸ್ತನ್ನು ಉಲ್ಲಂಘಿಸದಿರುವುದಕ್ಕೆ ಕನ್ನಡಿ ಹಿಡಿದಂತಿವೆ. ರಾಜ್ಯದಲ್ಲಿ ಅತಿಹೆಚ್ಚು ಆಯವ್ಯಯ ಮಂಡಿಸಿದ ಹೆಗ್ಗಳಿಕೆ ಜತೆಗೇ
ನುಡಿದದ್ದನ್ನೆ ನಡೆದ ಸಿದ್ದರಾಮಯ್ಯ ನವರ ಆರ್ಥಿಕ ಶಿಸ್ತು, ಜನಪರ ಕಾಳಜಿ ಮೇಳೈಸಿದ ಘೋಷಣೆಗಳನ್ನು ಅನುಷ್ಠಾನಗೊಳಿಸಿದ ಖ್ಯಾತಿಯೂ ಸೇರಿದೆ.
2018ರ ಫೆಬ್ರುವರಿ ಯಲ್ಲಿ 13ನೇ ಆಯವ್ಯಯ ಮಂಡಿಸಿ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯ ಅವರು ರಾಜ್ಯದ ಭವಿಷ್ಯದಲ್ಲಿ ಮತ್ಯಾರೂ ತಮ್ಮನ್ನು ಸರಿಗಟ್ಟಲು ಸಾಧ್ಯವಾಗದ ಮಟ್ಟದ ದಾಖಲೆಯನ್ನು ದಾಖಲಿಸುತ್ತಿದ್ದಾರೆ.
ಅಧ್ಯಯನ ಮತ್ತು ಸಂಶೋಧನೆಗೆ ಅರ್ಹವಾದ ಸಿದ್ದರಾಮಯ್ಯ ಅವರ ದಾಖಲೆಯ ಆಯವ್ಯಯಗಳಲ್ಲಿ ಪ್ರಮುಖವಾಗಿ ಎರಡು ಸಂಗತಿಗಳನ್ನು ಗಮನಿಸಬಹುದು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1991ನ್ನು ಮತ್ತು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಷರತ್ತುಗಳನ್ನು ಎಲ್ಲೂ ಉಲ್ಲಂಘಿಸಿಲ್ಲ. ಆರ್ಥಿಕ ಶಿಸ್ತಿನ ಚೌಕಟ್ಟನ್ನು ದಾಟಿಲ್ಲ.
ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1991ನ್ನು ಸಿದ್ದಪಡಿಸಿ ಜಾರಿಗೊಳಿಸಿದರು. ಹಾಗೆಯೇ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಮೂಲಕ ಸರ್ಕಾರದ ವಿತ್ತೀಯ ವಿಧಾನಗಳನ್ನು ಸರಳೀಕರಿಸಿದ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜುಗಳನ್ನು (MTFP) ಅನ್ನು ವಾರ್ಷಿಕ ಆಯವ್ಯಯದೊಂದಿಗೆ ವಿಧಾನಮಂಡಲದಲ್ಲೇ ಕಡ್ಡಾಯಗೊಳ್ಳುವಂತೆ ಮಾಡಿದ್ದು ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ಮತ್ತು ದೂರದೃಷ್ಟಿಗೆ ಹಿಡಿದ ಕನ್ನಡಿ ಎನ್ನುವ ಮೆಚ್ಚುಗೆಯ ಅಭಿಪ್ರಾಯಗಳು ಹಲವು ಆರ್ಥಿಕ ತಜ್ಞರಿಂದ ವ್ಯಕ್ತವಾಗಿವೆ.
ಇದುವರೆಗಿನ 13 ಆಯವ್ಯಯಗಳನ್ನು ಮಂಡಿಸುವ ಹೊತ್ತಿನಲ್ಲಿ ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕು ಮತ್ತು ಅಧಿಕಾರ ಇತ್ತು. ಈಗ ರಾಜ್ಯಗಳ ಈ ಹಕ್ಕನ್ನು ಕೇಂದ್ರದ GST ಕಿತ್ತುಕೊಂಡಿದೆ. ಜತೆಗೆ ಈಗಾಗಲೇ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುವುದನ್ನು ಕೇಂದ್ರ ಸರ್ಕಾರ ನಿರಾಕರಿಸುವ ಮೂಲಕ ಸಿದ್ದರಾಮಯ್ಯ ಅವರ ಎದುರಿಗೆ ಭಯಾನಕ ಸವಾಲನ್ನು ಕೇಂದ್ರ ಸರ್ಕಾರ ಕೃತಕವಾಗಿ ಸೃಷ್ಟಿಸಿದೆ.
GST ಮತ್ತು ಕೇಂದ್ರದ ಅಸಹಕಾರದ ನಡುವೆ ಮುಖ್ಯಮಂತ್ರಿಗಳು ಐದು ಗ್ಯಾರಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲೇ ಖಡಾ ಖಂಡಿತವಾಗಿ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ.
ಸರ್ಕಾರ ಒಂದು ಪಕ್ಷಕ್ಕೆ, ಒಂದು ಧರ್ಮಕ್ಕೆ ಸೇರಿದ್ದಲ್ಲ ಎನ್ನುವುದನ್ನು 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಾಬೀತು ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಮಂಡಿಸಿದ ಮೊದಲ ಆಯವ್ಯಯದ ಗಾತ್ರ 12,616 ಕೋಟಿ ಆಗಿದ್ದರೆ 13 ನೇ ಆಯವ್ಯಯದ ಗಾತ್ರ 2,09,181 ಕೋಟಿ ಆಗಿತ್ತು. 14 ನೇ ಆಯವ್ಯಯದ ಗಾತ್ರ 3,35,000 ಕೋಟಿ ಆಗಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಅಂದಾಜಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ ಆಯವ್ಯಯದ ಗಾತ್ರದ ಜತೆಗೆ ಆರ್ಥಿಕ ಸವಾಲುಗಳೂ ಬೆಳೆದಿವೆ. ಸಮಾಜವಾದಿ ಆರ್ಥಿಕ ನೀತಿಗಳನ್ನು ಅಳಿಸುತ್ತಾ ಜನಪರ ಕಾಳಜಿಗಳನ್ನು ಕೊಲ್ಲುತ್ತಾ ಲಾಭವಷ್ಟೆ ಆಧ್ಯತೆ ಆಗಿರುವ ಮಾರುಕಟ್ಟೆ ಮತ್ತು ಕಾರ್ಪೋರೇಟ್ ಆರ್ಥಿಕ ನೀತಿ ದೇಶವನ್ನು ಆಳುತ್ತಿರುವ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 14ನೇ ಆಯವ್ಯಯ ಸವಾಲುಗಳಿಂದಲೇ ಸುತ್ತುವರೆದಿದೆ.
ಈ ಸವಾಲುಗಳ ಚಕ್ರವ್ಯೂಹವನ್ನು ಮುಖ್ಯಮಂತ್ರಿಗಳು ಭೇದಿಸಿ ತಮ್ಮ ಜೀವಮಾನದ ಕಾಳಜಿಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ 24 ಗಂಟೆಗಳಲ್ಲಿ ತೆರೆ ಬೀಳಲಿದೆ.