ಬೆಂಗಳೂರು:
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸತ್ತಿ ಮತ್ತು ಇತರೆ 08 ಗ್ರಾಮಗಳಿಗೆ 45.39 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸಚಿವ ಸಂಪುಟವು ಅಂಕಿತ ನೀಡಿದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿಯವರು ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಇಂದು ಈ ವಿವರ ನೀಡಿದ ಅವರು, ಸತ್ತಿಯೂ ಸೇರಿದಂತೆ ಒಟ್ಟು 09 ಗ್ರಾಮಗಳಲ್ಲಿ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಬಾಕಿ ಇತ್ತು. ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಯವರಲ್ಲಿಯೂ ನಾವು ಮನವಿ ಮಾಡಿಕೊಂಡಿದ್ದೆವು. ಇಂದು ಸಚಿವ ಸಂಪುಟವು ಈ ಯೋಜನೆಗೆ ಅನುಮೋದನೆ ನೀಡಿರುವುದರಿಂದ ಆ ಭಾಗದ ಸ್ಥಳೀಯರ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.
ಕೇಂದ್ರದ “ಜಲ ಜೀವನ್ ಮಿಷನ್” ಯೋಜನೆಯಡಿ 18.12 ಕೋಟಿ ರೂ.ಗಳನ್ನು, ಆರ್.ಐ.ಡಿ.ಎಫ್. (ನಬಾರ್ಡ್) ನಿಂದ 15.40 ಕೋಟಿ ರೂ.ಗಳನ್ನು ಮತ್ತು ನಮ್ಮ ರಾಜ್ಯ ಸರ್ಕಾರದಿಂದ 11.87 ಕೋಟಿ ರೂ.ಗಳ ಅನುದಾನದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲು ಸಂಪುಟವು ಹಸಿರುನಿಶಾನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಜಾರಿಗೊಳಿಸಲಾಗುವ ಈ ಯೋಜನೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಅವರಖೋಡ, ನಾಗನೂರ ಪಿ.ಕೆ, ದೊಡವಾಡ, ನಂದೇಶ್ವರ, ಸವದಿ, ಹಲ್ಯಾಳ, ಹುಲಗಬಾಳ, ಸಂಕೋನಟ್ಟಿ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆ ಸಾಧ್ಯವಾಗಿ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಸವದಿಯವರು ವಿವರಿಸಿದರು.