Home ಬೆಂಗಳೂರು ನಗರ ಕಾರ್ಪೋರೇಟ್ ಕಂಪನಿಗಳು ಸರ್ಕಾರದೊಂದಿಗೆ ಕೈಜೋಡಿಸಲು ಮುಖ್ಯಮಂತ್ರಿ ಮನವಿ

ಕಾರ್ಪೋರೇಟ್ ಕಂಪನಿಗಳು ಸರ್ಕಾರದೊಂದಿಗೆ ಕೈಜೋಡಿಸಲು ಮುಖ್ಯಮಂತ್ರಿ ಮನವಿ

47
0

ಬೆಂಗಳೂರು:

ಕೋವಿಡ್-19 ಸವಾಲಿನ ಪರಿಸ್ಥಿತಿಯನ್ನು ತಂದೊಡ್ಡಿದ್ದು, ಈ ಹೋರಾಟದಲ್ಲಿ ಕಾರ್ಪೋರೇಟ್ ಕಂಪನಿಗಳು ಸರ್ಕಾರಗಳೊಂದಿಗೆ ಕೈಜೋಡಿಸಿ ಆರೋಗ್ಯ ಸೇವಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು.

ಗೋಲ್ಡ್ ಮನ್ ಸಾಕ್ಸ್ ಕಂಪನಿಯ ವತಿಯಿಂದ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗಾಗಿ 20 ಕೋಟಿ ರೂ ಮೌಲ್ಯದ ವಿವಿಧ ಸೌಲಭ್ಯಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರಿಸಲಾಯಿತು. ಈ ಸಮಯದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಪ್ರಸ್ತುತ ಪರಿಸ್ಥಿತಿ ಯಾವುದೇ ಯುದ್ದಕ್ಕಿಂತ ಕಡಿಮೆಯಿಲ್ಲ, ಹಾಗಾಗಿ ಈ ಕೋವಿಡ್ ಸೋಲಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಅದಕ್ಕಾಗಿ ಖಾಸಗಿ ಕಂಪನಿಗಳು ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಕರೆಕೊಟ್ಟರು.

ಈ ನಿಟ್ಟಿನಲ್ಲಿ ಗೋಲ್ಡ್ ಮ್ಯಾನ್ ಸಾಕ್ಸ್ ಕಂಪನಿ ಒಟ್ಟು ರೂ. 20 ಕೋಟಿ ವ್ಯಯಿಸುತ್ತಿದ್ದು, ಇದರಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಾದ ಸೈಂಟ್ ಜಾನ್ಸ್ ಆಸ್ಪತ್ರೆಗೆ 50 ITU ಹೊಂದಿರುವ ಹಾಸಿಗೆಗಳು, ಪ್ರಕ್ರಿಯಾ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್ ಸೇರಿದಂತೆ ಕೋವಿಡ್ ಆರೈಕೆ ಕೇಂದ್ರಕ್ಕೆ 50 ಬೆಡ್, HAL ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದ ಕಾರ್ಯಗಳಿಗೆ ಪೂರಕವಾಗಿ 50 ಬೆಡ್, ನಾರಾಯಣ ಹೆಲ್ತ್ ಆಸ್ಪತ್ರೆಗೆ 120 HDU ಬೆಡ್ ನೀಡಲಾಗುತ್ತಿದೆ. ಸುಮಾರು 7 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಗಳನ್ನು ವಿತರಿಸಲಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಚಿಕಿತ್ಸಾ ಸೌಕರ್ಯ, ವೈದ್ಯಕೀಯ ಪರಿಕರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ TX Instruments IN ಮತ್ತು The Embassy Group ನಂತರ ಇದು ಸರ್ಕಾರಕ್ಕೆ 3ನೇ ದೊಡ್ಡ ಕೊಡುಗೆಯಾಗಿದೆ.

ರಾಜ್ಯ ಸರ್ಕಾರ ಬೆಂಗಳೂರಿನ 8 ವಲಯಗಳಲ್ಲಿ ವಿಂಘಡಿಸಿ, ಪ್ರತಿ ವಲಯದಲ್ಲಿ 500 ಐಸಿಯು ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಮಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್. ಹರ್ಷ ಅವರನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಅವರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೋರೇಟ್‍ ಕಂಪನಿಗಳಿಗೆ ಮನವಿ ಮಾಡಿ ಈಗಾಗಲೇ ಇರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅವುಗಳಲ್ಲಿರುವ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಖಾಸಗಿ ಕಂಪನಿಗಳ ಸಹಾಯ ಪಡೆದು ಉನ್ನತೀಕರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಹಾಗೂ ಕೋವಿಡ್ ಆಸ್ಪತ್ರೆಗಳ ನಿರ್ಮಾಣಕ್ಕೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಡಾ: ಪಿ.ಎಸ್.ಹರ್ಷ ಹಾಗೂ ಗೋಲ್ಡ್ ಮನ್ ಸಾಕ್ಸ್ ಕಂಪನಿಯ ಮುಖ್ಯಸ್ಥ ಗುಂಜನ್ ಸಂತಾನಿ ಮತ್ತು ಮುಖ್ಯ ಆಡಳಿತಾಧಿಕಾರಿ ರವಿ ಕೃಷ್ಣನ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here