ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ಗೌರವ್ ಗುಪ್ತ ರವರಿಂದ ಅಂತಿಮ ನಮನ
ಬೆಂಗಳೂರು:
ನಾಡಿನ ಹಿರಿಯ ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜಮುಖಿ, ವಿಚಾರವಾದಿ, ಶತಾಯುಷಿ ಪ್ರೋ. ಹೆಚ್ ಎಸ್. ದೊರೆಸ್ವಾಮಿ ಅವರಿಗೆ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಚಾಮರಾಜಪೇಟೆಯ ಟಿ. ಆರ್. ಮಿಲ್ ಚಿತಾಗಾರದಲ್ಲಿ ಅಂತಿಮ ನಮನ ಸಲ್ಲಿಸಿ ಹಿರಿಯ ಚೇತನವನ್ನು ಇಹಲೋಕದಿಂದ ಬೀಳ್ಕೊಡಲಾಯಿತು.
ಇತ್ತೀಚಿಗಷ್ಟೇ ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿ ಬಂದಿದ್ದ ಅವರು ಇಂದು ನಗರದ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದರು.
ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರೊಂದಿಗೆ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಉಪಸ್ಥಿತರಿದ್ದರು.
ಪ್ರೊ. ದೊರೆಸ್ವಾಮಿ ಅವರು ಪತ್ರಕರ್ತರಾಗಿ ಪೌರವಾಣಿ ಪತ್ರಿಕೆ ನಡೆಸುವ ಮೂಲಕ ತಮ್ಮ ಬರಹಗಳಿಂದ ಆಗಲೇ ಜನಮಾನಸದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದ ಶ್ರೀಯುತರು ಅನೇಕ ಮಾಧ್ಯಮ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪತ್ರಕರ್ತರ ಏಳಿಗೆಗೆ ಶ್ರಮಿಸಿದ್ದರು.
ಸ್ವಾತಂತ್ರ್ಯ ಹೋರಾಟ, ಗೋವಾ ಮುಕ್ತಿ ಚಳುವಳಿ, ತುರ್ತು ಪರಿಸ್ಥಿತಿ ಇಂತಹ ಅನೇಕ ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದರು. ಆ ಪರಂಪರೆಯ ಕೊಂಡಿ ಕಳಚುವ ಮೂಲಕ ಆ ಸ್ಥಾನಕ್ಕೆ ಶೂನ್ಯ ಆವರಿಸಿದೆ.
ತಮ್ಮ ಇಳಿವಯಸ್ಸಿನಲ್ಲೂ ಅನೇಕಾನೇಕ ಶಾಂತಿಯುತ ಧರಣಿ, ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡು ನಾಗರಿಕ ಪ್ರಜ್ಞೆ ಮೆರೆದು ಆಡಳಿತದ ಗಮನ ಸೆಳೆದ ಹಿರಿಯ ಚೇತನ ಇಂದು ನಮ್ಮಿಂದ ದೂರವಾಗಿರುವುದು ಈ ನಾಡಿಗೆ ತುಂಬಲಾರದ ನಷ್ಟ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಗಲಿದ ಚೇತನ ಶ್ರೀ ದೊರೆಸ್ವಾಮಿರವರ ಕುಟುಂಬದವರಿಗೆ ಮತ್ತು ಅವರ ಅಪಾರ ಅಭಿಮಾನಿ ಅನುಯಾಯಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಆಶಿಸಿದ್ದಾರೆ.