Home Uncategorized ವರ್ಷದೊಳಗೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸಿ.ಎಂ.ಬಸವರಾಜ ಬೊಮ್ಮಾಯಿ ಸೂಚನೆ

ವರ್ಷದೊಳಗೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸಿ.ಎಂ.ಬಸವರಾಜ ಬೊಮ್ಮಾಯಿ ಸೂಚನೆ

16
0
CM Basavaraja Bommai instructed to complete all work on Smart City project within the year
bengaluru

ಹುಬ್ಬಳ್ಳಿ:

ಮುಂದಿನ ಒಂದು ವರ್ಷದ ಅವಧಿಯೊಳಗೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಘಂಟಿಕೇರಿಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ,ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಅನುದಾನದಡಿ ನಗರಪ್ರದೇಶದ ಬಡವರ್ಗಗಳ ಪ್ರದೇಶದಲ್ಲಿ ಸುಮಾರು 34 ಕೋಟಿ ರೂ.ವೆಚ್ಚದ ವಿವಿಧ ಮೂಲಸೌಕರ್ಯಗಳ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

2014-15 ರಿಂದ ಪ್ರಾರಂಭವಾಗಿ‌ 2020ರ ಅವಧಿಯಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 555 ಕೋಟಿ ರೂ.ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. ರಸ್ತೆ, ಒಳಚರಂಡಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಇದೇ ಆರ್ಥಿಕ ವರ್ಷದ ಮಾರ್ಚ್ 31 ರೊಳಗೆ ಮುಗಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಯೋಜನಾಬದ್ಧವಾಗಿ ಕೆಲಸ ಮಾಡಬೇಕು. ಸಮಯ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು,ಗುಣಮಟ್ಟ ಕಾಪಾಡಿಕೊಳ್ಳದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

bengaluru

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 30 ಕೋಟಿ ಇತ್ತು, ಸ್ವಾತಂತ್ರ್ಯಾನಂತರ ಈಗ ಈ ಪ್ರಮಾಣ 130 ಕೋಟಿಗೆ ಏರಿದೆ.ನಗರೀಕರಣದಿಂದಾಗಿ ಶೇ.14 ರಷ್ಟಿದ್ದ ನಗರ ಪ್ರದೇಶದ ಜನಸಂಖ್ಯೆಯ ಪ್ರಮಾಣ ಶೇ.37 ಕ್ಕೆ ಏರಿಕೆಯಾಗಿದೆ.ಪ್ರಧಾನಮಂತ್ರಿಗಳ ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭಿಸಿದ್ದು, ರಾಜ್ಯದ 7 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಗೆ ಆಯ್ಕೆ ಮಾಡಲಾಗಿದೆ ಎಂದರು.

ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿಯಲ್ಲಿ ತಾರತಮ್ಯಕ್ಕೆ ಆಸ್ಪದವಿಲ್ಲ:

ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ತಮಗೆ ಇಲ್ಲಿನ ಎಲ್ಲಾ ಪ್ರದೇಶಗಳ ಬಹುತೇಕ ಸಮಸ್ಯೆಗಳು ತಿಳಿದಿವೆ.ಮುಖ್ಯ ಕಾಲುವೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು.ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯಕ್ಕೆ ಆಸ್ಪದವಿಲ್ಲ.300 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಕೇಂದ್ರ ಸ್ಥಾಪನೆಗೆ ಅಗಸ್ಟ್ ತಿಂಗಳಲ್ಲಿ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗುವುದು. ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪಿಸಿ ಒಂದು ಲಕ್ಷ ಉದ್ಯೋಗ ಸೃಜನೆಯ ಬಜೆಟ್ ಘೋಷಣೆಯ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ.ತುಮಕೂರು ಮತ್ತು ಧಾರವಾಡದಲ್ಲಿ ವಿಶೇಷ ಬಂಡವಾಳ ಕಾರ್ಯಕ್ರಮಗಳ ಮೂಲಕ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಮತ್ತು ಆ ಮೂಲಕ ಕಾರವಾರ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆಯು ಅರಣ್ಯ ಹಾಗೂ ಪರಿಸರ ಮಂತ್ರಾಲಯದ ಕ್ಲಿಯರೆನ್ಸ್ ಪಡೆಯುವ ಹಂತದಲ್ಲಿದೆ ಶೀಘ್ರ ಯೋಜನೆ ಕೈಗೆತ್ತಿಕೊಳ್ಳುವ ಭರವಸೆ ಇದೆ.

ತುಮಕೂರು-ದಾವಣಗೆರೆ ಹಾಗೂ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ದೊರೆತಿದ್ದು,ಯೋಜನೆಯನ್ನು ಇದೇ ವರ್ಷ ಪ್ರಾರಂಭಿಸುವ ಗುರಿ ಇದೆ. ಹುಬ್ಬಳ್ಳಿ ಧಾರವಾಡದ ಸಮಗ್ರ ಅಭಿವೃದ್ಧಿಗೊಳಿಸುವ ಮೂಲಕ ಉತ್ತರ ಕರ್ನಾಟಕದ ವಾಣಿಜ್ಯ ಅಭಿವೃದ್ಧಿಗೆ ಇಂಬು ನೀಡಲಾಗುವುದು. ಹಳೆ ಹುಬ್ಬಳ್ಳಿ ಭಾಗದ ರೈತರ ಬೇಡಿಕೆಯಂತೆ ಇಲ್ಲಿ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು .

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನೂತನ ವಿದ್ಯುತ್ ಚಿತಾಗಾರವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕ ಪ್ರಸಾದ ಅಬ್ಬಯ್ಯ, ಬಿಜೆಪಿ ಮುಖಂಡರಾದ ವೀರೇಶ್ ಅಂಚಟಗೇರಿ, ನಾಗೇಶ್ ಕಲಬುರ್ಗಿ ಮತ್ತಿತರರು ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here