
Karnataka Chief Minister inaugurated Free Bus Travel scheme for women's by giving free tickets to them
ಉಳಿತಾಯದ ಹಣ ಕುಟುಂಬಕ್ಕೆ: ಮಹಿಳಾ ʼಶಕ್ತಿʼಯ ಆಶಯ
ಬಸ್ ನಲ್ಲಿ ಪ್ರಯಾಣಿಸಿ ಶಕ್ತಿಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು
ಬೆಂಗಳೂರು:
“ಕಾಲೇಜಿಗೆ ಸ್ಟೂಡೆಂಟ್ ಬಸ್ ಪಾಸ್ ಗೆ ಪ್ರತಿ ಸೆಮಿಸ್ಟರ್ ಗೆ 1500 ರೂ. ವೆಚ್ಚವಾಗುತ್ತಿತ್ತು. ಈಗ ಫ್ರೀ ಮಾಡಿರೋದರಿಂದ ವರ್ಷಕ್ಕೆ 3,000 ರೂಪಾಯಿ ಉಳಿತಾಯ ಆಗುತ್ತೆ. ಇದರಲ್ಲಿ ಮನೆಯವರಿಗೆ ಏನಾದರೂ ಕೊಳ್ಳಬಹುದು”- ಮಹಾರಾಣಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಂಜನಾಳ ನುಡಿ ಇದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಉದ್ಘಾಟಿಸಿದ ನಂತರ ಮುಖ್ಯಮಂತ್ರಿಯವರೊಂದಿಗೆ ಮೆಜೆಸ್ಟಿಕ್ ವರೆಗೆ ಬಸ್ ಪ್ರಯಾಣ ಮಾಡಿದ ಹೆಮ್ಮೆ ಇವಳದ್ದು. ಬಸ್ ಪ್ರಯಾಣ ಉಚಿತ ಮಾಡಿದ್ದರಿಂದ ಗಾರೆ ಕೆಲಸ ಮಾಡಿ ತಮ್ಮನ್ನು ಓದಿಸುತ್ತಿರುವ ಪೋಷಕರಿಗೆ ಸ್ವಲ್ಪ ಮಟ್ಟಿನ ನಿರಾಳವಾಗಲಿದೆ ಎಂಬ ಆಶಾ ಭಾವನೆ ಸಂಜನಾಳದ್ದು.

ಅಂತೆಯೇ ಮನೆಗೆಲಸಕ್ಕೆಂದು ಗಂಗಾ ನಗರದಿಂದ ಹೆಬ್ಬಾಳದ ವರೆಗೆ ದಿನನಿತ್ಯ ಪ್ರಯಾಣಿಸುವ ಸರಳಾ ಅವರಿಂದ ದಿನಕ್ಕೆ 20 ರೂ. ಬಸ್ ಚಾರ್ಜ್ ಉಳಿತಾಯವಾಗುವುದಂತೆ. ಮನೆಗೆ ಅಗತ್ಯ ವಸ್ತು ಕೊಳ್ಳಲು ಅನುಕೂಲವಾಗುವುದು ಎಂದು ಹೇಳುತ್ತಾರೆ. ಮತ್ತೊಬ್ಬ ಮಹಿಳೆ ಗಂಗಾ ಗೌರಿ ಬಸ್ ಪ್ರಯಾಣ ಫ್ರೀ ಆಗಿರೋದು ತುಂಬಾ ಖುಷಿ ಆಗುತ್ತೆ ಎಂದು ನಗೆ ತುಳುಕಿಸಿ ನುಡಿದರು.
ಮಲ್ಲೇಶ್ವರಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿರುವ ಶಶಿಕಲಾಗೆ ತಂದೆ ಇಲ್ಲ. ತಾಯಿ ಗಾರೆ ಕೆಲಸ ಮಾಡಿ ಉದರ ಪೋಷಣೆ ಮಾಡುತ್ತಿದ್ದಾರೆ. ಬಸ್ ಪ್ರಯಾಣ ಉಚಿತವಾಗಿರುವುದರಿಂದ ನನ್ನ ಬೇರೆ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬ ಆಶಾವಾದ ಅವಳದ್ದು.
ಮೈಸೂರು ಬ್ಯಾಂಕ್ ವೃತ್ತದ ಬಳಿ ಸಣ್ಣ ಉದ್ಯೋಗದಲ್ಲಿರುವ ಅಂಬಿಕಾ ಅವರಿಗೆ ಉಚಿತ ಬಸ್ ಪ್ರಯಾಣದಿಂದ ದಿನಕ್ಕೆ 40 ರೂ. ಉಳಿತಾಯವಾಗುತ್ತದೆ. ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಕೈಹಿಡಿತ ಸ್ವಲ್ಪ ಸಡಿಲ ಮಾಡಬಹುದು ಎಂಬ ಆಶಾಭಾವ ಅವರದ್ದು.
ಮುಖ್ಯಮಂತ್ರಿ @siddaramaiah ಅವರು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡಿ, ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೇಟ್ ವಿತರಿಸುವ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. pic.twitter.com/cZbdux4wRw
— CM of Karnataka (@CMofKarnataka) June 11, 2023
ಎಲ್ಲ ಫಲಾನುಭವಿ ಮಹಿಳೆಯರೂ ಉಳಿತಾಯದ ಹಣವನ್ನು ತಮ್ಮ ಕುಟುಂಬದವರಿಗಾಗಿಯೇ ಬಳಸುವ ಚಿಂತನೆ ವ್ಯಕ್ತವಾಯಿತು.
ಬಸ್ ಕಂಡಕ್ಟರ್ ನಂದಿನಿ ಅವರಿಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರು ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ. ಇಟಿಎಂ ನಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಣೆಗೆ ಸೂಕ್ತ ಮಾರ್ಪಾಡು ಮಾಡಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ವಿವರಿಸಿದರು.
ಮೊದಲ ಪ್ರಯಾಣದಲ್ಲಿದ್ದ ಮಹಿಳೆಯರಿಗೆ ಟಿಕೆಟ್ ಜೊತೆ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸತ್ಕರಿಸಲಾಯಿತು.
ಮುಖ್ಯಮಂತ್ರಿಯವರು ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ವಿಧಾನಸೌಧದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಬಸ್ ಗಳಿಗೆ ಚಾಲನೆ ನೀಡಿದರು. ನಂತರ ವಿಧಾನಸೌಧಕ್ಕೆ ಬಸ್ ನಲ್ಲಿಯೇ ಹಿಂದಿರುಗಿ ಪತ್ರಿಕಾಗೋಷ್ಠಿ ನಡೆಸಿದರು.