ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕರ್ನಾಟಕದ ಕ್ರೀಡಾಪಟುಗಳಿಗೆ 10 ಲಕ್ಷ ರೂ.ಗಳ ಪ್ರೋತ್ಸಾಹಧನ ವಿತರಿಸಿ ಶುಭ ಹಾರೈಸಿದರು.
ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ 120 ಕ್ರೀಡಾಪಟುಗಳ ಪೈಕಿ ರಾಜ್ಯದ ಶ್ರೀಹರಿ ನಟರಾಜ್(ಈಜು), ಫೌವಾದ್ ಮಿರ್ಜಾ (ಈಕ್ವೆಸ್ಟ್ರೀಯೆನ್) ಹಾಗೂ ಅದಿತಿ ಅಶೋಕ್ (ಗಾಲ್ಫ್) ಸೇರಿದ್ದಾರೆ ಎಂಬುದು ಹೆಮ್ಮೆ ಪಡುವ ವಿಚಾರ. ರಾಜ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ವಿಶ್ವ ದಜೆಯ ಕ್ರೀಡಾ ಮೂಲಸೌಕರ್ಯ ವೃದ್ಧಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಂಡ್ಯ ನಗರದಲ್ಲಿರುವ ಕ್ರೀಡಾಂಗಣವನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಿ ಅತ್ಯುತ್ತಮ ದರ್ಜೆಯ ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು. ದೇವನಹಳ್ಳಿಯಲ್ಲಿ ಫುಟ್‍ಬಾಲ್, ಹಾಕಿ, ಶೂಟಿಂಗ್, ಈಜು,ಟೆನ್ನಿಸ್ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಭೂತ ಸೌಲಭ್ಯಗಳನ್ನು ಸೃಜಿಸಿ ಮಿಷನ್ ಒಪಂಪಿಕ್ಸ್ ಗೆ ಸಿದ್ಧಗೊಳಿಸಲಾಗುವುದು, ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ವಿವರಿಸಿದರು.
It was a pleasure interacting with Karnataka's ace swimmer, Srihari Nataraj, who will be representing India in the Tokyo Olympics. I wish him and all our participating athletes good luck. #Cheer4India pic.twitter.com/f1p6B3jEDk
— B.S. Yediyurappa (@BSYBJP) July 14, 2021
ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಜಯಶಾಲಿಯಾಗುವ ಮೂಲಕ ದೇಶದ ಕೀರ್ತಿ ಹೆಚ್ಚಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾರೈಸಿದರು.
ಇದೇ ಸಂದರ್ಭದಲ್ಲಿ ಈಜುಪಟು ಶ್ರೀಹರಿ ನಟರಾಜ್ ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.
ಅಭಿನಂದನಾ ಸಮಾರಂಭದಲ್ಲಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ನಾರಾಯಣ ಗೌಡ, ವಿಧಾನ ಪರಿಷತ್ ಸದಸ್ಯ ಹಾಗೂ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಗೋವಿಂದರಾಜು, ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಮೊದಲಾವದರು ಉಪಸ್ಥಿತರಿದ್ದರು.