Home ಶಿಕ್ಷಣ ಕಾಲೇಜು ಉಪನ್ಯಾಸಕರ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ ಜುಲೈ 16ರಂದು ಪ್ರಕಟ; 27ರಿಂದ ಸಾಮಾನ್ಯ ಅಭ್ಯರ್ಥಿಗಳ...

ಕಾಲೇಜು ಉಪನ್ಯಾಸಕರ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ ಜುಲೈ 16ರಂದು ಪ್ರಕಟ; 27ರಿಂದ ಸಾಮಾನ್ಯ ಅಭ್ಯರ್ಥಿಗಳ ಕೌನ್ಸೆಲಿಂಗ್‌

41
0

ಬೆಂಗಳೂರು:

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರ ವರ್ಗಾವಣೆ  ಆರಂಭವಾಗಿದ್ದು,  ಜುಲೈ 16ರಂದು ಸಾಮಾನ್ಯ ಆಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟವಾಗಲಿದ್ದು, ಜುಲೈ 27ರಿಂದ 3 ದಿನಗಳ ಕಾಲ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಪ್ರಕಟಿಸಿದರು.

ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಅವರು, ಈ ವರ್ಗಾವಣೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರುತ್ತದೆ. ಯಾವ ಹಸ್ತಕ್ಷೇಪಕ್ಕೂ ಅವಕಾಶ ಇರುವುದಿಲ್ಲ. ಗುಣಮಟ್ಟದ ಶಿಕ್ಷಣ ಕೊಡುವ ಬದ್ಧತೆ ಇಟ್ಟುಕೊಂಡು ಸರಕಾರ ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಿದೆ. ಬೋಧಕರು ತಮಗೆ ಸೂಕ್ತವೆನಿಸುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಪಾರದರ್ಶಕ ಗಣಕೀಕೃತ ಕೌನ್ಸಿಲಿಂಗ್‌ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದರು.

ವರ್ಗಾವಣೆ ವೇಳಾಪಟ್ಟಿ:

ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 14 ಆಗಿದ್ದು, ಜುಲೈ 16ರಂದು ಆದ್ಯತಾ ಪಟ್ಟಿ ಪ್ರಕಟಿಸಲಾಗುವುದು. ಜುಲೈ 20ರಂದು ವಿಶೇಷ ಪ್ರಕರಣಗಳ ಆದ್ಯತಾ ಪಟ್ಟಿ ಪ್ರಕಟವಾಗಲಿದೆ. ಜುಲೈ 22ರಂದು ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸಿಲಿಂಗ್ ಹಾಗೂ 27ರಿಂದ 29ರವರೆಗೆ ಸಾಮಾನ್ಯ ಅಭ್ಯರ್ಥಿಗಳ ಕೌನ್ಸಿಲಿಂಗ್‌ ನಡೆಯಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಮಾರ್ಗಸೂಚಿಯಲ್ಲಿ ಏನಿದೆ?

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮ-2021 ಅನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಪ್ರಸ್ತುತ ರೂಪಿಸಿರುವ ವರ್ಗಾವಣೆ ನಿಯಮಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಐದು ವಲಯಗಳಲ್ಲಿ ವಿಂಗಡಿಸಿ ವಲಯಮುಕ್ತ ವರ್ಗಾವಣೆಗೆ ಅವಕಾಶ ನೀಡಲಾಗಿದೆ.

ಬೆಂಗಳೂರು ಮಹಾನಗರ-ವಲಯ ಎ, ಎಲ್ಲಾ ಮಹಾನಗರ ಪಾಲಿಕೆಗಳನ್ನು ಹೊಂದಿರುವ ನಗರಗಳು (ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ವಿಜಯಪುರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು)-ವಲಯ ಬಿ, ಜಿಲ್ಲಾ ಕೇಂದ್ರಗಳು ಹಾಗೂ ನಗರಸಭೆಗಳನ್ನು ಹೊಂದಿರುವ ನಗರಗಳು-ವಲಯ ಸಿ, ಎಲ್ಲಾ ತಾಲೂಕು ಕೇಂದ್ರಗಳು ಹಾಗೂ ಪುರಸಭೆಗಳನ್ನು ಹೊಂದಿರುವ ಪಟ್ಟಣಗಳು-ವಲಯ ಡಿ, ಹಾಗೂ ಉಳಿದ ಎಲ್ಲಾ ಪ್ರದೇಶಗಳು-ವಲಯ ಇ ಎಂದು ವಿಂಗಡಿಸಲಾಗಿದೆ.

ಪ್ರಸ್ತುತ ರೂಪಿಸಿರುವ ನಿಯಮಗಳಲ್ಲಿ ಬೋಧಕರ ಕಡ್ಡಾಯ ವರ್ಗಾವಣೆ ಪ್ರಮುಖ ಅಂಶವಾಗಿದ್ದು, ಒಂದೇ ವಲಯದ ಹಲವು ಕಾಲೇಜುಗಳಲ್ಲಿ ಕರ್ತವ್ಯ ಬೋಧಕರು ವಲಯದ ಜೇಷ್ಠತೆಯಲ್ಲಿ ಪದೇಪದೆ ವರ್ಗಾವಣೆಗೆ ಒಳಪಡುವುದನ್ನು ತಪ್ಪಿಸಲು, ಒಂದು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿರುವ ಅವಧಿಯನ್ನು ಪರಿಗಣಿಸಿ, ಹೆಚ್ಚಿನ ಸೇವೆಯನ್ನು ಸಲ್ಲಿಸಿರುವ ಬೋಧಕರ ವಲಯವಾರು ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಿ ವೇಳಾಪಟ್ಟಿಯೊಂದಿಗೆ ವರ್ಗಾವಣೆ ಬಯಸುವ ಬೋಧಕರು ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್‌ ನೋಡಬಹುದು.

15% ಮಾತ್ರ ವರ್ಗಾವಣೆ:

ವರ್ಗಾವಣೆ ನಿಯಮದ ಮತ್ತೊಂದು ಪ್ರಮುಖ ಅಂಶ ಎಂದರೆ; ಒಟ್ಟು ಬೋಧಕ ಹುದ್ದೆಗಳ ಪೈಕಿ ಶೇ.15ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಶೇ.9ರಷ್ಟು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಹಾಗೂ ಶೇ.6ರಷ್ಟು ವಿಶೇಷ ಪ್ರಕರಣಗಳಿಗೆ ಅಂದರೆ; ವಿಕಲಚೇತನರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು, ವಿಧವೆಯರು, ಏಕ ಪೋಷಕರು, ವಿಚ್ಛೇಧಿತ ಮಹಿಳೆಯರು, ಪತಿ-ಪತ್ನಿ ಪ್ರಕರಣಗಳಿಗೆ ವಿಶೇಷ ಅವಕಾಶ ನಿಗದಿಪಡಿಸಲಾಗಿದೆ. ಅಲ್ಲದೆ, ಕೌನ್ಸೆಲಿಂಗ್‌ನಲ್ಲೂ ಇವರಿಗೆ ಆದ್ಯತೆ ನೀಡಲಾಗುವುದು.

ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹ ಬೋಧಕರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ನಿಯಮಾನುಸಾರ ದಾಖಲಾತಿಗಳ ಪರಿಶೀಲನೆಯ ನಂತರ ವರ್ಗಾವಣೆಯಲ್ಲಿ ನಿಯಮಗಳಲ್ಲಿ ನಿರ್ಬಂಧಿಸಿರುವ ಶೇ.6 ಮಿತಿಯೊಳಗೆ ವರ್ಗಾವಣೆ ಕೌನ್ಸಿಲಿಂಗ್‌ ಪ್ರಕ್ರಿಯೆಯನ್ನು 2 ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ.

ಎಲ್ಲಾ ವಲಯಗಳ ಬೋಧಕರಿಗೆ ಸಮಾನ ಅವಕಾಶ ನೀಡುವ ಸಲುವಾಗಿ ಕೌನ್ಸಿಲಿಂಗ್‌ ಪ್ರಕ್ರಿಯೆಯನ್ನು ಕ್ರಮವಾಗಿ ವಲಯ-ಬಿ ಯಿಂದ ಪ್ರಾರಂಭಿಸಿ, ನಂತರದಲ್ಲಿ ವಲಯ-ಸಿ, ವಲಯ-ಡಿ, ವಲಯ-ಇ ಮತ್ತು ವಲಯ-ಎ ಯಿಂದ ನಡೆಸಲಾಗುವುದು ಮತ್ತು ವಲಯ ಮುಕ್ತ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ಹಾಗೂ ಉಳಿಕೆ ರಾಜ್ಯ ವೃಂದದ ಬೋಧಕರ ಪ್ರತ್ಯೇಕ ವಲಯವಾರು ಪಟ್ಟಿಗಳನ್ನು ಪ್ರಕಟಿಸಿ, ಪಟ್ಟಿಗೆ ಸಂಬಂಧಿಸಿದಂತೆ ಬೋಧಕರಿಂದ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯವಿದ್ದಲ್ಲಿ ಆದ್ಯತಾ ಪಟ್ಟಿಯನ್ನು ಪರಿಷ್ಕರಿಸಿ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here