Home ಬೆಂಗಳೂರು ನಗರ ಬಿಬಿಎಂಪಿಯ ವಾರ್ಷಿಕ ಆದಾಯ ಮಿತಿಯೊಳಗೇ ಯೋಜನೆ ರೂಪಿಸುವಂತೆ ಬೊಮ್ಮಾಯಿ ಸಲಹೆ

ಬಿಬಿಎಂಪಿಯ ವಾರ್ಷಿಕ ಆದಾಯ ಮಿತಿಯೊಳಗೇ ಯೋಜನೆ ರೂಪಿಸುವಂತೆ ಬೊಮ್ಮಾಯಿ ಸಲಹೆ

107
0
Karnataka CM advises BBMP to prepare development plan according to acutal annual income
Advertisement
bengaluru

ಬೆಂಗಳೂರು ಅಭಿವೃದ್ಧಿ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ

ಬೆಂಗಳೂರು:

ಬೆಂಗಳೂರು ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಬೆಂಗಳೂರು ನಗರದ ಅಭಿವೃದ್ಧಿಯ ಯೋಜನೆಗಳು ಇನ್ನಷ್ಟು ಚುರುಕಾಗಿ ಅನುಷ್ಠಾನಗೊಳ್ಳಬೇಕು. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಸಚಿವರೊಂದಿಗೆ ಒಂದು ತಂಡವಾಗಿ ಕಾರ್ಯನಿರ್ವಹಿಸಲಾಗುವುದು. ಒಟ್ಟಾಗಿ ಕುಳಿತು ಚರ್ಚಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಶಾಸಕರ ಅಭಿಪ್ರಾಯಗಳನ್ನೂ ಪರಿಗಣಿಸಿ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

bengaluru bengaluru

ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಂಗಳೂರು ಅಭಿವೃದ್ಧಿಗಾಗಿ ಕೈಗೆತ್ತಿಕೊಂಡ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸಭೆಯ ಮುಖ್ಯಾಂಶಗಳು:

• ಬಿಬಿಎಂಪಿ ಯಲ್ಲಿ ವಾಸ್ತವ ಸ್ಥಿತಿಯನ್ನು ಆಧರಿಸಿ ಯೋಜನೆ ರೂಪಿಸುವ ಉದ್ದೇಶದಿಂದ ಬಿಬಿಎಂಪಿಯನ್ನು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗುತ್ತಿದೆ.
• ಬಿಬಿಎಂಪಿ ತನ್ನ ವಾರ್ಷಿಕ ಆದಾಯ ಮಿತಿಯೊಳಗೇ ಯೋಜನೆ ರೂಪಿಸುವಂತೆ ಸಲಹೆ ನೀಡಲಾಯಿತು.
• ಬಿಡಬ್ಲ್ಯು.ಎಸ್.ಎಸ್.ಬಿ.ಯು ಬಿಬಿಎಂಪಿ ವ್ಯಾಪ್ತಿಗೆ 110 ಗ್ರಾಮಗಳಲ್ಲಿ ನಿರ್ವಹಿಸುತ್ತಿರುವ ಎಂಟು ಸಾವಿರ ಬೋರ್ ವೆಲ್ ಗಳಲ್ಲಿ ಸುಸ್ಥಿತಿಯಲ್ಲಿರುವ ಬೋರ್ ವೆಲ್ ಗಳನ್ನು ಗುರುತಿಸಿ, ಅವುಗಳ ದುರಸ್ತಿ, ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
• ನಗರದಲ್ಲಿ ವರ್ಷಾಂತ್ಯದಲ್ಲಿ ಕನಿಷ್ಠ 3 ಲಕ್ಷ ಬೀದಿ ದೀಪಗಳನ್ನು ಎಲ್ ಇ ಡಿ ದೀಪಗಳಿಗೆ ಪರಿವರ್ತಿಸಲು ಸೂಚಿಸಲಾಯಿತು.
• ಮಳೆನೀರು ಚರಂಡಿಗಳ ಕುರಿತಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು.
• ಕಳೆದ ಬಾರಿ ಮಳೆಯಿಂದ ಕೊಚ್ಚಿ ಹೋದ/ ಹಾಳಾದ ಪ್ರಮುಖ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿ ಮಾಡುವಂತೆ ಸೂಚಿಸಲಾಯಿತು.
• 860 ಕಿ.ಮೀ. ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಬಗ್ಗೆ ಮತ್ತು ಸಂಚಾರ ನಿರ್ವಹಣೆ ಬಗ್ಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಕುರಿತು ಚಿಂತನೆ ನಡೆಸಲಾಗುವುದು.
• ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು ಶೀಘ್ರವೇ ಪೂರ್ಣಗೊಳಿಸಿ.
• ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಗಳನ್ನು ಚುರುಕುಗೊಳಿಸಿ.
• ಅಕ್ಟೋಬರ್ ಒಳಗೆ ಮೂರನೇ ಹಂತದ ನಗರೋತ್ಥಾನ ಯೋಜನೆಗೆ ಕಾಮಗಾರಿಗಳನ್ನು ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಯಿತು.
• ನಿರ್ಮಾಣದ ವಿವಿಧ ಹಂತದಲ್ಲಿರುವ 8 ಫ್ಲೈ ಓವರ್ ಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಚಿವರಾದ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ವಿ.ಸೋಮಣ್ಣ, ಆರ್.ಅಶೋಕ್, ಅರಗ ಜ್ಞಾನೇಂದ್ರ, ಎಸ್.ಟಿ. ಸೋಮಶೇಖರ್, ಬಿ.ಎ. ಬಸವರಾಜ, ಮುನಿರತ್ನ, ಕೆ.ಗೋಪಾಲಯ್ಯ, ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here