ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಮತ್ತು ರೈಲು ಮಾರ್ಗ ಡಬಲಿಂಗ್ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಬೆಂಗಳೂರು ಕಂಟೋನ್ಮೆಂಟ್ ನಿಂದ ಹೀಲಲಿಗೆ ನಡುವೆ ಸಂಚರಿಸಿ ಈ ಎರಡೂ ಯೋಜನೆಗಳ ತಪಾಸಣೆಯನ್ನು ನಡೆಸಿದ ಅವರು ಸಬ್ ಅರ್ಬನ್ ಯೋಜನೆಯಿಂದ ಬೆಂಗಳೂರು ನಗರದ ಹೊರವಲಯದ ಉಪನಗರಗಳು ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಾರಿಗೆ ಸಂಪರ್ಕ ಸುಲಭವಾಗಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯೂ ಇದೆ ಎಂದರು.
ರೈಲ್ವೆ ಡಬಲಿಂಗ್ ಯೋಜನೆಗಳಿಂದ ಬೆಂಗಳೂರು ನಗರದಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಬೆಂಗಳೂರು ಸಬ್‍ಅರ್ಬನ್ ರೈಲು ಯೋಜನೆಯನ್ನು 15,767 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆಯ ವೆಚ್ಚವನ್ನು ಕರ್ನಾಟಕ ಸರ್ಕಾರ, ಭಾರತ ಸರ್ಕಾರದ ಅನುದಾನ ಮತ್ತು ಬಾಹ್ಯ ಸಂಪನ್ಮೂಲಗಳಿಂದ 20:20:60ರ ಅನುಪಾತದಲ್ಲಿ ಭರಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
2020-21ರಲ್ಲಿ ರಾಜ್ಯ ಸರ್ಕಾರ 400 ಕೋಟಿ ರೂ.ಗಳನ್ನು ಈ ಯೋಜನೆಗಾಗಿ ಬಿಡುಗಡೆ ಮಾಡಿದೆ. ಕರ್ನಾಟಕಟಕ ಸರ್ಕಾರ ಮತ್ತು ಕೇಂದ್ರದ ರೈಲ್ವೆ ಸಚಿವಾಲಯದ ಜಂಟಿ ಮಾಲೀಕತ್ವದ ಕೆ-ರೈಡ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕಂದಾಯ ಸಚಿವ @RAshokaBJP, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಜೊತೆಗಿದ್ದರು. (2/2) pic.twitter.com/zueUAYrKz5
— CM of Karnataka (@CMofKarnataka) June 24, 2021
ಒಟ್ಟು 148 ಕಿ.ಮೀ. ಉದ್ದದ ಈ ಯೋಜನೆ 4 ಕಾರಿಡಾರ್‍ಗಳನ್ನು ಹೊಂದಿದೆ. ಕೆ.ಎಸ್.ಆರ್. ಬೆಂಗಳೂರು ಸಿಟಿ- ದೇವನಹಳ್ಳಿ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದಂತೆ)- ಇದರ ಉದ್ದ 41.40 ಕಿ.ಮೀ. ಬೈಯಪ್ಪನಹಳ್ಳಿ- ಚಿಕ್ಕಬಾಣಾವರ (25 ಕಿ.ಮೀ.), ಕೆಂಗೇರಿ- ವೈಟ್‍ಫೀಲ್ಡ್ (35.52 ಕಿ.ಮೀ.), ಹೀಲಲಿಗೆ (ಚಂದಾಪುರ)- ರಾಜಾನುಕುಂಟೆ (46.24 ಕಿ.ಮೀ.) ಇದರಲ್ಲಿ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮತ್ತು ಹೀಲಲಿಗೆ (ಚಂದಾಪುರ)- ರಾಜಾನುಕುಂಟೆ ಕಾರಿಡಾರ್ ಗಳ ಕಾಮಗಾರಿಯನ್ನು ಮೊದಲಿಗೆ ಕೈಗೆತ್ತಿಕೊಳ್ಳಲಾಗುವುದು.
ಡಬ್ಲಿಂಗ್ ಯೋಜನೆಗಳು
ಯಶವಂತಪುರ-ಚನ್ನಸಂದ್ರ ವಿಭಾಗ ಮತ್ತು ಬೈಯಪ್ಪನಹಳ್ಳಿ-ಹೊಸೂರು ಮಾರ್ಗಗಳು ಸಿಂಗಲ್ ಲೈನ್ ಗಳಾಗಿದ್ದ ಕಾರಣ ಬೆಂಗಳೂರು ನಗರದಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆ ನಡೆಸಲು ತೊಡಕು ಉಂಟಾಗಿತ್ತು. ಇದರ ನಿವಾರಣೆಗಾಗಿ 2018-19ರಲ್ಲಿ ಕೇಂದ್ರ ಮತ್ತು ರಾಜ್ಯ ಸಕಾರಗಳ ನಡುವೆ 50: 50 ಅನುಪಾತದಲ್ಲಿ ವೆಚ್ಚ ಹಂಚಿಕೆ ಆಧಾರದಲ್ಲಿ ಈ ಮಾರ್ಗಗಳ ಡಬಲಿಂಗ್ ಯೋಜನೆಗೆ ಮಂಜೂರಾತಿ ಲಭಿಸಿತು. ಈ ಯೋಜನೆಯನ್ನೂ ಸಹ ಕೆ-ರೈಡ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಬೈಯಪ್ಪನಹಳ್ಳಿ-ಹೊಸೂರು ನಡುವಿನ 48 ಕಿ.ಮೀ. ರೈಲು ಮಾರ್ಗ ಡಬಲಿಂಗ್ ಯೋಜನೆಯು 499 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದ್ದು, ರಾಜ್ಯ ಸರ್ಕಾರ 250 ಕೋಟಿ ರೂ. ವೆಚ್ಚ ಭರಿಸಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
Progress of the doubling works between BYPL to Hosuru. Despite pandemic work is progressing with full speed on the ground. pic.twitter.com/xEbQKW5bh8
— DRM Bengaluru (@drmsbc) June 24, 2021
2020-21ರಲ್ಲಿ ರಾಜ್ಯ ಸರ್ಕಾರವು ಇದಕ್ಕಾಗಿ 65 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯು 2020ರ ಅಕ್ಟೋಬರ್ ನಲ್ಲಿ ಪ್ರಾರಂಭವಾಗಿದ್ದು, 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕಾಮಗಾರಿಯ ಪೂರ್ವ ಸಿದ್ಧತೆ, ಸೇತುವೆಗಳ ವಿಸ್ತರಣೆ ಮೊದಲಾದ ಕೆಲಸಗಳು ಪ್ರಗತಿಯಲ್ಲಿವೆ. ಯಶವಂತಪುರ-ಚನ್ನಸಂದ್ರ ನಡುವಣ 22 ಕಿ.ಮೀ. ಮಾರ್ಗದ ಡಬಲಿಂಗ್ ಯೋಜನೆಗೆ ಒಟ್ಟು 315 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ 157 ಕೋಟಿ ರೂ. ಭರಿಸಲಿದೆ. ಕಳೆದ ಆರ್ಥಿಕ ವರ್ಷಲ್ಲಿ 35 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ ನಲ್ಲಿ ಕಾಮಗಾರಿ ಪ್ರಾರಂಭವಾಗಿದೆ.
ಕೇಂದ್ರ ಸರ್ಕಾರವೂ ಈ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುತ್ತಿದ್ದು, ನಿಗದಿತ ಕಾಲಮಿತಿಯೊಳಗೇ ಕಾಮಗಾರಿಗಳನ್ನು ಪೂಣಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
ಕಂದಾಯ ಸಚಿವ ಆರ್.ಅಶೋಕ್, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಉಪಸ್ಥಿತರಿದ್ದರು.