ಬೆಂಗಳೂರು:
ಕೂಡಲಸಂಗಮದಲ್ಲಿ ಕೈಗೆತ್ತಿಕೊಂಡಿರುವ ದೆಹಲಿಯಲ್ಲಿರುವ ಶ್ರೀ ಸ್ವಾಮಿ ನಾರಾಯಣ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತರರಾಷ್ಟ್ರೀಯ ಮಟ್ಟದ ಮ್ಯೂಸಿಯಂ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿ, ಮೊದಲ ಹಂತದ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸೂಚಿಸಿದರು.
ಅವರು ಇಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯನ್ನು ಮೊದಲ ಹಂತದಲ್ಲಿ 94 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಯಿತು.
ಎಂ.ಕೆ. ಹುಬ್ಬಳ್ಳಿಯಲ್ಲಿರುವ ಶರಣೆ ಗಂಗಾಂಬಿಕೆಯ ಐಕ್ಯ ಮಂಟಪದ ಹತ್ತಿರ ಮೂಲಸೌಕರ್ಯ ಅಭಿವೃದ್ಧಿಗೆ 1.25 ಕೋಟಿ ಅನುದಾನ ಮೀಸಲಿರಿಸಲು ತೀರ್ಮಾನಿಸಲಾಯಿತು.
ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ 81 ಮಳಿಗೆಗಳ ಎರಡು ತಿಂಗಳ 2.97 ಲಕ್ಷ ರೂ. ಬಾಡಿಗೆ ಮನ್ನಾ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆಹಾರ ಮತ್ತು ನಾಗರಿಕಪೂರೈಕೆ ಸಚಿವ ಉಮೇಶ್ ವಿ. ಕತ್ತಿ, ಬಾಗಲಕೋಟೆ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.