ಬೆಂಗಳೂರು:
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಕನಿಷ್ಟ 150 ರೂ. ಇಳಿಕೆ ಮಾಡುವಂತೆ ಅವರು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
” ಬಿಜೆಪಿ ಸರ್ಕಾರದ ಜನವಿರೋಧಿ ನೀತಿ, ನಿರ್ಧಾರಗಳ ವಿರುದ್ದ ”ಒಂದು ಪ್ರಶ್ನೆ’ ಸರಣಿ ಮೂಲಕ ಕೆಪಿಸಿಸಿ ಅಧ್ಯಕ್ಷರು ಜನಾಭಿಪ್ರಾಯ ಮೂಡಿಸುತ್ತಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಜನಪರ ವಿಚಾರಗಳ ಸರಣಿಯ ಭಾಗವಾಗಿ ಅವರು ಈ ವಾರ ಅಡುಗೆ ಅನಿಲ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ವಿಶೇಷವಾಗಿ, ಗೃಹಿಣಿಯರಿಗೆ ತಲೆಬಿಸಿ ತಂದಿಟ್ಟಿರುವ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿರುದ್ದ ಶಿವಕುಮಾರ್ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ವಸ್ತುಸ್ಥಿತಿ ವಿವರ ಹಂಚಿಕೊಂಡಿರುವ ಅವರು, ಸಾರ್ವಜನಿಕರ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದಾರೆ.
ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಪ್ರಸ್ತುತ 900 ರೂ. ಗಡಿ ತಲುಪಿದ್ದು, ಬೀದರ್ ಜಿಲ್ಲೆಯಲ್ಲಿ ಶನಿವಾರ ರೂ.956 ರೂ. ಇದೆ. ರೀಫಿಲ್ ಸಿಲಿಂಡರ್ ಬೆಲೆ ಸದ್ಯದಲ್ಲೇ ಒಂದು ಸಾವಿರ ರೂಪಾಯಿ ತಲುಪಬಹುದು.
ರಾಜ್ಯದ ಜನ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಕೋವಿಡ್ ಸಾವು- ನೋವು ಮುಗಿದಿಲ್ಲ. ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಪಾದನೆ ಇಲ್ಲದೆ ಸಂಸಾರ ಸರಿದೂಗಿಸಲು ಜನರು ಪರಿತಪಿಸುತ್ತಿರುವಾಗ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. ದೇಶದಲ್ಲಿ290 ದಶಲಕ್ಷ ಗೃಹಬಳಕೆ ಎಲ್ ಪಿಜಿ ಗ್ರಾಹಕರಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿಯೂ ನಿಂತುಹೋಗಿದೆ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
” ನಾನು ರಾಜ್ಯದ ನಾನಾ ಭಾಗಗಳನ್ನು ಸುತ್ತುತ್ತಿದ್ದೇನೆ. ಎಲ್ಲ ಕಡೆಗಳಲ್ಲೂ ಬಡವರು, ಶ್ರೀಮಂತರು, ಮಧ್ಯಮ ವರ್ಗದ ಜನರು ಸೇರಿ ಎಲ್ಲ ವರ್ಗದ ಜನರೊಟ್ಟಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಎಲ್ಲ ವರ್ಗದ ಜನರು ತೊಂದರೆಗೆ ಒಳಗಾಗಿದ್ದಾರೆ. ಬಡ ಕುಟುಂಬಗಳಂತೂ ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕಾ ಅಥವಾ ಹೊಟ್ಟೆ ತುಂಬಿಸಿಕೊಳ್ಳಲು ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಬೇಕಾ ಎಂಬ ಅನಿವಾರ್ಯ ಆಯ್ಕೆಯ ಗೊಂದಲದಲ್ಲಿ ಸಿಕ್ಜಿಬಿದ್ದಿದ್ದಾರೆ” ಎಂದು ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Are you ready for this week's question?
— DK Shivakumar (@DKShivakumar) September 11, 2021
ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ. #OnduPrashne pic.twitter.com/yv5IyeD0mq
ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆ ಸಾಧ್ಯವಾಗದೆ ಜನ ಆತ್ಮಹತ್ಯೆ ದಾರಿ ಉಳಿಯುತ್ತಿರುವ ಈ ಸಂಕಟದ ಕಾಲದಲ್ಲಿ ಸರ್ಕಾರ ನಿರಂತರವಾಗಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿರುವುದು ಜನವಿರೋಧಿ ಮಾತ್ರವಲ್ಲ, ಅಮಾನವೀಯ ಕೂಡ” ಎಂದು ಕೆಪಿಸಿಸಿ ಅಧ್ಯಕ್ಷರು ಕಿಡಿಕಾರಿದ್ದಾರೆ.
ಉಜ್ವಲ ಯೋಜನೆಯಡಿ ಎಲ್ ಪಿಜಿ ಸಿಲಿಂಡರ್ ಬಳಕೆ ಮಾಡುತ್ತಿದ್ದ ಕೆಲವು ಕುಟುಂಬಗಳು ಬೆಲೆ ಏರಿಕೆ ಕಾರಣದಿಂದ ಮತ್ತೆ ಸೌದೆ ಒಲೆಗೆ ಮರಳುತ್ತಿದ್ದಾರೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಗೃಹಿಣಿಯರು ಎಲ್ ಪಿಜಿ ರೀಫಿಲ್ ಮಾಡಿಸಲು ಕಷ್ಟಪಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಕನಿಷ್ಟ 150 ರೂ. ಇಳಿಸಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ತಮ್ಮ ಈ ಅಭಿಪ್ರಾಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಜನಾಭಿಪ್ರಾಯ ಕೇಳಿದ್ದಾರೆ. ರೀಫಿಲ್ ಸಿಲಿಂಡರ್ ಬೆಲೆಯನ್ನು ಕನಿಷ್ಟ 150 ರೂ. ತಗ್ಗಿಸಬೇಕೇ? ಈ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಫೇಸ್ ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.