Home ಬೆಂಗಳೂರು ನಗರ Covid-19: ರಾಜ್ಯ, ಕೇಂದ್ರದಿಂದ ಸುಳ್ಳು ಸಾವಿನ ಲೆಕ್ಕ – ರಾಮಲಿಂಗಾ ರೆಡ್ಡಿ ಆರೋಪ

Covid-19: ರಾಜ್ಯ, ಕೇಂದ್ರದಿಂದ ಸುಳ್ಳು ಸಾವಿನ ಲೆಕ್ಕ – ರಾಮಲಿಂಗಾ ರೆಡ್ಡಿ ಆರೋಪ

606
0
Karnataka Congress leader Ramalinga Reddy alleges for sharing false Covid-19 deaths

ಬೆಂಗಳೂರು:

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೋವಿಡ್ ಮೃತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ಕೋವಿಡ್ ಸಾವಿನ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ಮಾಹಿತಿ ಪ್ರಕಾರ ಕೋವಿಡ್ ನಲ್ಲಿ ಸತ್ತಿರುವವರ ಸಂಖ್ಯೆ 37,318. “ರಾಜ್ಯದಲ್ಲಿ ಜನನ ಹಾಗೂ ಮರಣ ಇಲಾಖೆಯ ಅಧಿಕೃತ ಅಂಕಿ ಅಂಶ ಹಾಗೂ ವರ್ಷವಾರು ಮೃತರ ಗಣತಿ ಪ್ರಕಾರ, 2018ರಲ್ಲಿ ಸತ್ತವರ ಸಂಖ್ಯೆ 4,83,511, 2019ರಲ್ಲಿ 5,08,584, 2020ರಲ್ಲಿ 5,51,808 ಜನ ಸತ್ತಿದ್ದಾರೆ. ಪ್ರತಿ ವರ್ಷ ಸತ್ತವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2021ರ ಆರಂಭಿಕ ಏಳು ತಿಂಗಳು ಅಂದರೆ ಜುಲೈ ತಿಂಗಳವರೆಗೂ 4.21 ಲಕ್ಷ ಜನ ಸತ್ತಿದ್ದಾರೆ,” ಎಂದು ಅವರು ಹೇಳಿದರು.

ಇನ್ನು ಪ್ರತಿ ವರ್ಷ ಆರಂಭಿಕ ಏಳು ತಿಂಗಳ ಸಾವಿನ ಸಂಖ್ಯೆ ನೋಡುವುದಾದರೆ, 2018ರಲ್ಲಿ 2.69 ಲಕ್ಷ ಜನ ಮೃತಪಟ್ಟರೆ, 2019ರಲ್ಲಿ 2,79 ಲಕ್ಷ ಜನ ಸತ್ತಿದ್ದಾರೆ, 2020ರಲ್ಲಿ 2.64 ಲಕ್ಷ ಜನ ಸತ್ತಿದ್ದರು. 2021ರಲ್ಲಿ 4,26,790 ಜನ ಸತ್ತಿದ್ದಾರೆ. ಅಂದರೆ 1.62 ಲಕ್ಷ ಜನ ಹೆಚ್ಚುವರಿಯಾಗಿ ಸತ್ತಿದ್ದಾರೆ.

ಈ 1.62 ಲಕ್ಷ ಜನ ಹೇಗೆ ಸತ್ತಿದ್ದಾರೆ? ರಾಜ್ಯದಲ್ಲಿ ಸುನಾಮಿ, ಭೂಕಂಪ, ಚಂಡಮಾರುತ ಬಂದಿತ್ತೇ? ಕಾಲರ, ಪ್ಲೇಗ್ ನಂತಹ ಬೇರೆ ಕಾಯಿಲೆಗಳು ಬಂದಿತ್ತೇ? ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.

ಕಳೆದ ವರ್ಷವೇ ಕೋವಿಡ್ ನಿಂದ 30 ಸಾವಿರ ಜನ ಸತ್ತಾಗ ಕೇವಲ 3 ಸಾವಿರ ಜನ ಎಂದು ಲೆಕ್ಕ ತೋರಿಸಿದ್ದರು. ಸರ್ಕಾರ ಕೋವಿಡ್ ಸಾವಿನ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ ಎಂದು ಅವರು ಹೇಳಿದರು.

ಸರ್ಕಾರ ಹೇಗೆ ಈ ಸುಳ್ಳು ಲೆಕ್ಕ ನೀಡುತ್ತಿದೆ ಎಂಬುದು ತಿಳಿಯಬೇಕಾದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆದವರು, ಟಿಬಿ, ಕ್ಯಾನ್ಸರ್, ಹೃದಯ ಸಂಬಂಧಿ, ಬಿಪಿ, ಆರ್ಥರೈಟಿಸ್, ಪಾರ್ಶ್ವವಾಯು, ಸೇರಿದಂತೆ ಇತರೆ ಅನಾರೋಗ್ಯವಿರುವವರು ಸತ್ತರೆ ಕೋವಿಡ್ ಸಾವು ಎಂದು ಮರಣಪತ್ರ ನೀಡುವುದಿಲ್ಲ.

ಸೋಂಕಿತರು ನಂತರ ನೆಗೆಟಿವ್ ಬಂದರೆ ಅವರನ್ನು ಕೋವಿಡ್ ಎಂದು ಪರಿಗಣಿಸುವುದಿಲ್ಲ. ಹೀಗೆ ಸರ್ಕಾರಗಳು ತಪ್ಪು ಸಾವಿನ ಲೆಕ್ಕ ನೀಡುತ್ತಿದೆ.

ಈ ಯಾವುದೇ ಕಾಯಿಲೆ ಇಲ್ಲದವರು ಕೋವಿಡ್ ನಿಂದ ಸತ್ತಿದ್ದರೆ ಅದನ್ನು ಸಾತ್ರ ಕೋವಿಡ್ ಸಾವು ಎಂದು ಪರಿಗಣಿಸಿದ್ದಾರೆ. ಆ ರೀತಿ ಸತ್ತಿರುವವರು 37 ಸಾವಿರ ಜನ ಇದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 42.80 ಲಕ್ಷ ಜನ ಭಾರತದಲ್ಲಿ ಕೋವಿಡ್ ನಿಂದ ಸತ್ತಿದ್ದಾರೆ ಎಂದು ವರದಿ ನೀಡಿದೆ.

ಮೃತರಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಆದರೆ ಸರ್ಕಾರ ಕೇವಲ 1 ಲಕ್ಷ ಪರಿಹಾರ ಘೋಷಿಸಿದ್ದು, ಅದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಪರಿಹಾರ ಇಲ್ಲ, ಕುಟುಂಬದಲ್ಲಿ ಒಬ್ಬರಿಗೆ, ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಪರಿಹಾರ ಎಂಬ ಷರತ್ತುಗಳನ್ನು ಹಾಕಿದ್ದಾರೆ.

ದೇಶದಲ್ಲಿ 41 ಲಕ್ಷ ಜನ ಸತ್ತಿರುವುದನ್ನು ಮುಚ್ಚಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿವೆ. ಕೋವಿಡ್ ಮೃತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿ ತಾಂತ್ರಿಕವಾಗಿ ಮಾರ್ಗಸೂಚಿ ಹೊರಡಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ರೆಡ್ಡಿ ಆರೋಪಿಸಿದರು.

ಈ ಅಂಕಿ ಅಂಶಗಳು ಕೇವಲ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟವರ ಸಂಖ್ಯೆಯಾದರೆ, ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲಿ ಮೃತಪಟ್ಟವರ ಸಂಖ್ಯೆ ಬೇರೆಯಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ತನ್ನ ವೈಫಲ್ಯ ಮುಚ್ಚಿಹಾಕಲು ಸುಳ್ಳು ಸಾವಿನ ಲೆಕ್ಕ ನೀಡುತ್ತಿದೆ. ಅಧಿವೇಶನದಲ್ಲಿ ಕೋವಿಡ್ ವಿಚಾರ ಬಂದಾಗ ಈ ಎಲ್ಲ ವಿಚಾರವೂ ಪ್ರಸ್ತಾಪವಾಗಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here