Home ಬೆಂಗಳೂರು ನಗರ ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು?: ಡಿ.ಕೆ. ಶಿವಕುಮಾರ್ ಪ್ರಶ್ನೆ

ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು?: ಡಿ.ಕೆ. ಶಿವಕುಮಾರ್ ಪ್ರಶ್ನೆ

52
0
Karnataka Congress leader Shivakumar Questions: Where is IT, ED when BJP leaders are accused of corruption?

ನವದೆಹಲಿ:

‘ಆಪರೇಷನ್ ಕಮಲ, ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಬಿಜೆಪಿ ನಾಯಕರು ಹಣ ಖರ್ಚು ಮಾಡಿದ ಬಗ್ಗೆ ಆರೋಪ ಕೇಳಿ ಬಂದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಎಲ್ಲಿದ್ದವು? ಬಿಜೆಪಿಯವರ ವ್ಯವಹಾರಗಳೆಲ್ಲಾ ಸರಿಯಾಗಿದ್ದಾವಾ..?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ಸಂಬಂಧ ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು: ‘ನಮ್ಮ ಪಕ್ಷದ ಶಾಸಕರಾದ ಜಮೀರ್ ಅಹ್ಮದ್ ಅವರ ಮನೆ, ಕಚೇರಿ ಮೇಲಿನ ಇ.ಡಿ. ದಾಳಿ ಖಂಡನೀಯ. ಕಾನೂನು ಪ್ರಕಾರ ಅದನ್ನು ಎದುರಿಸಲು ಜಮೀರ್ ಅವರು ಸಮರ್ಥರಿದ್ದಾರೆ. ಎರಡು ವರ್ಷಗಳ ಹಿಂದೆ ಇ.ಡಿ. ಅಧಿಕಾರಿಗಳು ಜಮೀರ್ ಅವರಿಗೆ ನೋಟೀಸ್ ಜಾರಿ ಮಾಡಿ, ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವುದಾಗಿ ಜಮೀರ್ ಅವರೇ ನನಗೆ ತಿಳಿಸಿದ್ದರು. ಈಗಿನ ಸಂದರ್ಭದಲ್ಲಿ ದಾಳಿ ಅಗತ್ಯ ಇರಲಿಲ್ಲ. ಯಾವ ರೀತಿ ಈ ಕಿರುಕುಳ ನೀಡಲಾಗುತ್ತದೆ ಎಂಬುದು ನನಗೂ ಗೊತ್ತಿದೆ.

‘ಜಮೀರ್ ಹೇಳಿಕೆಗಳು ಮುಗಿದಿರುವಾಗ ಅವರ ನಿವಾಸ ಹಾಗೂ ಆಪ್ತರ ಮನೆಗಳ ಮೇಲೆ ದಾಳಿ ಮಾಡಿ, ಕಿರುಕುಳ ನೀಡುತ್ತಿರುವುದು ಖಂಡನೀಯ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎಸಿಬಿ ನಿಜಕ್ಕೂ ಕಾರ್ಯಪ್ರವೃತ್ತವಾಗಿದ್ದರೆ, ಮಾಜಿ ಸಚಿವ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಅಶ್ವಥ್ ನಾರಾಯಣ ಅವರು 30 ಕೋಟಿ ಹಣದ ಆಮಿಷ ನೀಡಿ, 5 ಕೋಟಿ ಹಣವನ್ನು ನನ್ನ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆರೋಪ ಮಾಡಿದಾಗ ಈ ಇಲಾಖೆಗಳು ಎಲ್ಲಿ ಹೋಗಿದ್ದವು. ಸಿ.ಪಿ. ಯೋಗೇಶ್ವರ್ ಮನೆ ಮಾರಿ 9 ಕೋಟಿ ಹಣ ಖರ್ಚು ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದಾಗ ಈ ಇಲಾಖೆಗಳು ಏನಾಗಿದ್ದವು?’

‘ಅವರ ಮೇನೆ ಮೇಲೆ ದಾಳಿ ಆದವಾ? ಅವರಿಗೆ ಈ ತನಿಖಾ ಸಂಸ್ಥೆಗಳಿಂದ ನೋಟೀಸ್ ಜಾರಿಯಾಯ್ತಾ? ವಿಧಾನಸಭೆಯಲ್ಲೇ ನೀಡಿದ ಹೇಳಿಕೆಗಿಂತ ಬೇರೆ ಸಾಕ್ಷಿ ಏನು ಬೇಕಿತ್ತು..? ಇವುಗಳು ಭ್ರಷ್ಟಾಚಾರ, ಹಣ ಅವ್ಯವಹಾರದ ಪ್ರಕರಣಗಳಲ್ಲವೇ? ಯಾಕೆ ಈ ಬಗ್ಗೆ ಪ್ರಕರಣಗಳು ದಾಖಲಾಗಲಿಲ್ಲ. ನಾನು ಅವರ ವೈಯಕ್ತಿಕ ವ್ಯವಹಾರಗಳ ಬಗ್ಗೆ ಮಾತನಾಡುತ್ತಿಲ್ಲ. ಅವರ ಬಾಯಿಂದ ಬಂದ ನುಡಿಮುತ್ತುಗಳನ್ನೇ ಆಧರಿಸಿ ಪ್ರಶ್ನೆ ಮಾಡುತ್ತಿದ್ದೇನೆ.’

‘ಯಾರ್ಯಾರ ಅನುಕೂಲಕ್ಕೆ ಹೇಗೆ ಬೇಕೋ, ಹಾಗೆ ಈ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅಧಿಕಾರ ಇದೆ ಎಂದು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಕಾನೂನು ರೀತಿಯಲ್ಲಿ ಜಮೀರ್ ಅವರು ಉತ್ತರ ನೀಡಲಿದ್ದಾರೆ. ಅವರಿಗೆ ಆ ಶಕ್ತಿ ಇದೆ. ಆದರೆ ಕಾಂಗ್ರೆಸ್ ನಾಯಕರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಇನ್ನೊಂದು ಕಾನೂನು ಎಷ್ಟು ಸರಿ? ಬಿಜೆಪಿಯವರೆಲ್ಲಾ ಬಹಳ ಸಾಚಾತನದಲ್ಲಿ ವ್ಯವಹಾರ ಮಾಡುತ್ತಿದ್ದಾರಾ..? ಏಕೆ ಈ ತಾರತಮ್ಯ ಆಗುತ್ತಿದೆ?’

‘ಕಾನೂನು ಪ್ರಕಾರ ವಿಚಾರಣೆ ನಡೆಯಲಿ, ಅದನ್ನು ಪ್ರಶ್ನಿಸುವುದಿಲ್ಲ. ಈ ಹಿಂದೆ ಐಎಂಎ ವಿಚಾರವಾಗಿಯೇ ಇಡಿ ಅವರು ಕೊಟ್ಟ ನೋಟೀಸ್ ಗೆ ಜಮೀರ್ ಖಾನ್ ಅವರು ವಿಚಾರಣೆಗೆ ಹಾಜರಾಗಿ ಉತ್ತರ ನೀಡಿದ್ದಾರೆ. ಇದು ಮುಗಿದು ಎಷ್ಟೋ ದಿನ ಆಗಿದೆ. ಎಲ್ಲ ಮುಗಿದ ಮೇಲೆ ಈಗ ಐಎಂಎ ಪ್ರಕರಣದ ಹೆಸರಲ್ಲಿ ದಾಳಿ ಮಾಡುವ ಅಗತ್ಯ ಏನಿತ್ತು? ಇಷ್ಟು ದಿನ ಯಾಕೆ ಸುಮ್ಮನಿದ್ದರು?’

‘ಏಳು ಬಾರಿ ಶಾಸಕರಾಗಿದ್ದ ರೋಶನ್ ಬೇಗ್ ಅವರು ಏನಾಗಿದ್ದಾರೆ ಎಂಬ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ನಿರ್ದಿಷ್ಟ ವರ್ಗಕ್ಕೆ ತೊಂದರೆ ನೀಡಲು ಈ ರೀತಿ ದಾಳಿಗಳು ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ.’

LEAVE A REPLY

Please enter your comment!
Please enter your name here