ರಕ್ಷಣಾ ಇಲಾಖೆ ಸ್ವಾಧೀನದ 750 ಎಕರೆ ಭೂಮಿ ಹಸ್ತಾಂತರ – ಡಾ.ಸಿ.ಎನ್.ಅಶ್ವತ್ಥ ನಾರಾಯಣ ಚರ್ಚೆ
ನವದೆಹಲಿ:
ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಿಸಲು ರಕ್ಷಣಾ ಇಲಾಖೆ ಸ್ವಾಧೀನದಲ್ಲಿರುವ ಸುಮಾರು 750 ಎಕರೆ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಡುವಂತೆ ರಾಜ್ಯದ ಐಟಿ/ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಕೋರಿದ್ದಾರೆ.
ರಾಜನಾಥ್ ಸಿಂಗ್ ಅವರನ್ನು ಶನಿವಾರ ನವದೆಹಲಿಯ ಅವರ ಮನೆಯಲ್ಲಿ ಭೇಟಿಯಾಗಿ ಈ ಬಗ್ಗೆ ಪ್ರಸ್ತಾಪಿಸಿದರು. ಈ ಜಾಗವನ್ನು ಕರ್ನಾಟಕ ಸರ್ಕಾರಕ್ಕೆ ಬಿಟ್ಟುಕೊಟ್ಟರೆ ಐಟಿ ಉದ್ಯಮದ ಜೊತೆಗೆ ಎಲೆಕ್ಟ್ರಾನಿಕ್ ಹಾರ್ಡ್ ವೇರ್, ವೈಮಾಂತರಿಕ್ಷ ಹಾಗೂ ಇತರ ತಯಾರಿಕಾ ಉದ್ಯಮಗಳ ಬೆಳವಣಿಗೆಗೆ ಪೂರಕವಾಗುವಂತೆ ಬಳಸಿಕೊಳ್ಳಲಾಗುವುದು ರಾಜನಾಥ್ ಅವರಿಗೆ ತಿಳಿಸಿದರು.
ದಾಖಲೆಗಳ ಪ್ರಕಾರ ಬೆಳಗಾವಿ ಗ್ರಾಮದ ಆರ್.ಎಸ್. ನಂಬರ್ 1304ರಿಂದ 1397ರವರೆಗಿನ ಜಾಗಗಳಲ್ಲಿರುವ ಈ ಭೂಮಿಯು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ ಇದೆ. ಹೀಗಾಗಿ ಉದ್ದೇಶಿತ ಐ.ಟಿ.ಪಾರ್ಕ್ ಸ್ಥಾಪನೆಗೆ ಅನುಕೂಲಕರವಾಗಿದೆ. ಈ ಭೂಮಿಯನ್ನು ರಾಜ್ಯ ಸರ್ಕಾರ ಪುನರ್ ಸ್ವಾಧೀನಕ್ಕೆ ತೆಗೆದುಕೊಳ್ಳಲು 2012ರ ನವೆಂಬರ್ ನಲ್ಲೇ ಆದೇಶ ಹೊರಡಿಸಿದೆ. ಆದರೆ ಇದು ರಕ್ಷಣಾ ಇಲಾಖೆ ಸ್ವಾಧೀನದಲ್ಲೇ ಮುಂದುವರಿದಿದೆ ಎಂಬ ಅಂಶವನ್ನು ಅಶ್ವತ್ಥ ನಾರಾಯಣ ಅವರು ಮನವರಿಕೆ ಮಾಡಿಕೊಟ್ಟರು.
Shri Rajnath Singh Ji responded stating a detailed report has been requested from the concerned office & within 60 days a suitable decision will be taken by his office.
— Abhay Patil (@iamabhaypatil) February 13, 2021
ಕರ್ನಾಟಕ ರಾಜ್ಯವು ಐ.ಟಿ./ಐಟಿಇಎಸ್ ಉದ್ಯಮದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಅಗ್ರಶ್ರೇಯಾಂಕ ಕಾಯ್ದುಕೊಳ್ಳುವ ದಿಸೆಯಲ್ಲಿ ಇತ್ತೀಚೆಗೆ ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಪ್ರಕಟಿಸಲಾಗಿದೆ. ಜೊತೆಗೆ, ಬೆಂಗಳೂರಿಗೆ ಹೊರತಾದ ಬೇರೆ ಪ್ರದೇಶಗಳಲ್ಲೂ ಐಟಿ/ಐಟಿಇಎಸ್ ಹಾಗೂ ಎಲೆಕ್ಟ್ರಾನಿಕ್ ಉದ್ಯಮಗಳನ್ನು ಬೆಳೆಸಿ, ರಾಜ್ಯದಲ್ಲಿ ಸಮತೋಲನದ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಿದೆ. ಹೀಗಾಗಿ, ಈ ಜಾಗ ಬಿಟ್ಟುಕೊಟ್ಟರೆ ಉದ್ಯಮದ ಬೆಳವಣಿಗೆಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ ಎಂದರು.
ಬೆಳಗಾವಿಯು ಉತ್ತಮ ಶೈಕ್ಷಣಿಕ ವಲಯವಾಗಿದೆ. ಪಕ್ಕದ ಧಾರವಾಡದಲ್ಲಿ ಐಐಟಿ-ಧಾರವಾಡ, ಐಐಐಟಿ-ಧಾರವಾಡ, ಕೆ.ಎಲ್.ಇ.ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಪ್ರತಿವರ್ಷ ಪ್ರತಿಭಾವಂತ ಪದವೀಧರರು ಹೊರಬರುತ್ತಿದ್ದಾರೆ. ಜೊತೆಗೆ ಇಲ್ಲಿ ಐಟಿ/ಐಟಿಇಎಸ್ ಉದ್ಯಮಕ್ಕೆ ಸೂಕ್ತವಾದ ಪರ್ಯಾವರಣವಿದೆ. ಬೆಳಗಾವಿಯಲ್ಲಿ ಐ.ಟಿ.ಪಾರ್ಕ್ ನಿರ್ಮಾಣದಿಂದ ಈ ಕ್ಷೇತ್ರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇದೆ. ಈ ಐಟಿ ಪಾರ್ಕ್ ನಿರ್ಮಾಣವು ಭಾರತದ ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿಯಲ್ಲಿ ಕರ್ನಾಟಕದ ಶೇ 30ರಷ್ಟು ಕೊಡುಗೆಗೆ ಪೂರಕವಾಗಿರಲಿದೆ ಎಂದು ಅಶ್ವತ್ಥ ನಾರಾಯಣ ಮನವರಿಕೆ ಮಾಡಿಕೊಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಅವರೂ ಡಿಸಿಎಂ ಜತೆ ಸಿಂಗ್ ಅವರನ್ನು ಭೇಟಿ ಮಾಡಿದರು.