Home ಬೆಂಗಳೂರು ನಗರ ರೈತರ ಆದಾಯ ಹೆಚ್ಚಳಕ್ಕೆ ನವೋದ್ಯಮ ತಾಂತ್ರಿಕತೆ, ನೇರ ಮಾರುಕಟ್ಟೆ ವ್ಯವಸ್ಥೆ

ರೈತರ ಆದಾಯ ಹೆಚ್ಚಳಕ್ಕೆ ನವೋದ್ಯಮ ತಾಂತ್ರಿಕತೆ, ನೇರ ಮಾರುಕಟ್ಟೆ ವ್ಯವಸ್ಥೆ

63
0
Karnataka focuses on start-up tech & direct market linkage to increase farmers’ income says Minister Ashwathnarayan1

ನಾಗಪುರದ ಮಹಾ ಕೃಷಿಮೇಳ ‘ಅಗ್ರೋವಿಷನ್’ನಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ

ನಾಗಪುರ/ಬೆಂಗಳೂರು:

ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಗಳಿಗೆ ಮತ್ತು ತಾಂತ್ರಿಕ ಉದ್ಯಮಶೀಲರಿಗೆ ಕೃಷಿ ಹಾಗೂ ಕೃಷಿಪೂರಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಜೊತೆಗೆ, ಕೃಷಿ/ಆಹಾರ ತಾಂತ್ರಿಕ ಕಂಪನಿಗಳು ಹಾಗೂ ಕೃಷಿ ಉತ್ಪಾದಕ ಸಂಸ್ಥೆಗಳ ನಡುವೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಒತ್ತು ಕೊಡಲಾಗಿದೆ  ಎಂದು ರಾಜ್ಯದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಪ್ರತಿ ವರ್ಷ ಇಲ್ಲಿ ನಡೆಯುವ ಮಧ್ಯಭಾರತದ ಅತ್ಯಂತ ದೊಡ್ಡ ಕೃಷಿಮೇಳವಾದ ‘ಅಗ್ರೋವಿಷನ್’ನ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ಅವರು ‘ತಂತ್ರಜ್ಞಾನದಿಂದ ಕೃಷಿಯ ಪರಿವರ್ತನೆ- ಆವಿಷ್ಕಾರ ಮತ್ತು ನವೋದ್ಯಮಗಳು’ ಕುರಿತು ಮಾತನಾಡಿದರು.

Karnataka focuses on start-up tech & direct market linkage to increase farmers’ income says Minister Ashwathnarayan1

ಕರ್ನಾಟಕದಲ್ಲಿ ಕೃಷಿಕಲ್ಪದಂತಹ ಸಾಮಾಜಿಕ ಉದ್ಯಮಗಳ ಮೂಲಕ ನೇರ ಮಾರುಕಟ್ಟೆ ವ್ಯವಸ್ಥೆಗೆ ಸೌಕರ್ಯ ಕಲ್ಪಿಸಲಾಗಿದೆ. ಆಯ್ದ ಜಿಲ್ಲೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಇದುವರೆಗೆ ರಾಜ್ಯದಲ್ಲಿ ಕೃಷಿ ಉತ್ಪನ್ನಗಳಿಗೆ ಈ ವ್ಯವಸ್ಥೆಯಿಂದ ರೂ 7 ಕೋಟಿ ಮೌಲ್ಯದ ಮಾರುಕಟ್ಟೆಯನ್ನು ಒದಗಿಸಲಾಗಿದೆ. ಇದರಿಂದಾಗಿ ರೈತರಿಗೆ 1.2 ಕೋಟಿ ರೂಪಾಯಿ ಹೆಚ್ಚಿನ ಆದಾಯ ಬಂದಿರುವುದರ ಜೊತೆಗೆ ಕೃಷಿ ಉತ್ಪಾದಕ ಸಂಸ್ಥೆಗಳಿಗೆ 80 ಲಕ್ಷಕ್ಕಿಂತ ಹೆಚ್ಚಿನ ಲಾಭವಾಗಿದೆ ಎಂದು ವಿವರಿಸಿದರು.

ರೈತರನ್ನು ಗಮನದಲ್ಲಿರಿಸಿಕೊಂಡು ಕೃಷಿ ಪೂರೈಕೆ ಸರಪಳಿಗೆ ಹೊಸ ರೂಪ ಕೊಡುವುದು ಅತ್ಯಗತ್ಯವಾಗಿದೆ. ಪ್ರತಿಯೊಬ್ಬ ಕೃಷಿಕನನ್ನೂ ಒಬ್ಬ ಸಣ್ಣ ಉದ್ಯಮಿಯನ್ನಾಗಿಸುವುದರ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ. ಮುಂಬರುವ ತಲೆಮಾರಿನ ರೈತರು ಹೆಚ್ಚಿನ ತಾಂತ್ರಿಕ ಜ್ಞಾನ ಹೊಂದಿದವರಾಗಿರುತ್ತಾರೆ. ಬ್ರಾಡ್ ಬ್ಯಾಂಡ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಕುಗ್ರಾಮವನ್ನೂ ತಲುಪಲಿವೆ. ಇಂತಹ ಸನ್ನಿವೇಶದಲ್ಲಿ ನಾವು ಈ ತಾಂತ್ರಿಕ ಬೆಳವಣಿಗೆಯನ್ನು ಕೃಷಿ ಇಳುವರಿ ಹೆಚ್ಚಿಸಲು,  ಉತ್ಪಾದಕತೆ ಅಧಿಕವಾಗಿಸಲು, ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸಲು ಬಳಸಿಕೊಳ್ಳುವ ಬಗ್ಗೆ ಆಲೋಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಈಗ ಬೆಳೆಗೆ ಏನೇನು ಹಾಕಬೇಕೆಂಬ ಸೂಚನೆಯನ್ನು ತಂತ್ರಜ್ಞಾನವೇ ಒದಗಿಸುತ್ತದೆ.  ಐಒಟಿ ತಾಂತ್ರಿಕತೆಯಿಂದ ಹವಾಮಾನ ವರದಿಯನ್ನು ಬಹುತೇಕ ನಿಖರವಾಗಿ ಕೊಡಬಹುದು. 3 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ 18 ಟನ್ ಗಳಷ್ಟು ಹಣ್ಣನ್ನು ಗ್ರೇಡ್ ಗಳಿಗೆ ತಕ್ಕಂತೆ ವಿಂಗಡಿಸಬಹುದಾದ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. 30 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಮಣ್ಣು ಪರೀಕ್ಷೆಯ ಫಲಿತಾಂಶ ಕೊಡಬಹುದಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ಬಳಸಿ ಕೊಯ್ಲಿಗೆ ಬಂದ ಬೆಳೆ ಪ್ರಮಾಣ, ಪ್ರಕೃತಿ ವಿಕೋಪಗಳಿಂದಾದ ಬೆಳೆ ಹಾನಿ, ಇತ್ಯಾದಿಯನ್ನು ಲೆಕ್ಕಹಾಕಬಹುದಾಗಿದೆ ಎಂದು ವಿವರಿಸಿದರು.

ದೇಶದಲ್ಲಿ ಕೃಷಿ ತಾಂತ್ರಿಕ ನವೋದ್ಯಮಗಳು ಹೆಚ್ಚಾಗುತ್ತಿವೆ. ಕಳೆದ 11 ತಿಂಗಳಲ್ಲಿ ಈ ಕ್ಷೇತ್ರದಲ್ಲಿ 5000 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಈಗ ದೇಶದಾದ್ಯಂತ 70ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 8000 ಕೋಟಿ ರೂಪಾಯಿ ಮೊತ್ತದ ವಹಿವಾಟಿಗೆ ಅನುವು ಮಾಡಿಕೊಟ್ಟಿವೆ. ಇದರಿಂದಾಗಿ ಸಂಬಂಧಪಟ್ಟ ರೈತರ ಆದಾಯವು ಒಂದೂವರೆಯಿಂದ ಎರಡು ಪಟ್ಟು ಹೆಚ್ಚಾಗಿದೆ. ‘ಸ್ಥಳೀಯ ಪ್ರಯತ್ನಗಳು ಹಾಗೂ ಜಾಗತಿಕ ಉಪಯೋಗಗಳು’ ಎಂಬುದು ನಮ್ಮ ಮಂತ್ರವಾಗಬೇಕು. ಪ್ರತಿಯೊಂದು ಜಿಲ್ಲೆ/ತಾಲ್ಲೂಕು ಮಟ್ಟದಲ್ಲಿ ಕೊಯ್ಲೋತ್ತರ ಪರಿಹಾರ ಕೇಂದ್ರಗಳ ಸ್ಥಾಪನೆಗೆ ಒತ್ತು ಕೊಡುವ ಮೂಲಕ ರೈತರ ಆದಾಯವನ್ನು ಶೇ 20ರಷ್ಟು ಹೆಚ್ಚಿಸಿ ಯುವಜನತೆಯನ್ನು ಕೃಷಿ ಉದ್ಯಮಶೀಲತೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬಹುದು ಎಂದರು.

ಮೋದಿ ಅವರ ನೇತೃತ್ವದಲ್ಲಿ ಪ್ರತಿಯೊಂದು ಸವಾಲನ್ನೂ ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಮುನ್ನಡೆಯಲಾಗುತ್ತಿದೆ. ಪ್ರತಿಯೊಂದು ಸ್ಟಾರ್ಟ್ ಅಪ್ ಜಿಲ್ಲೆಯಲ್ಲಿ 5ರಿಂದ 10 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. 2017ರಿಂದ 20ರ ಅವಧಿಯಲ್ಲಿ ದೇಶಕ್ಕೆ ಕೃಷಿ ತಾಂತ್ರಿಕತೆ ಅನುದಾನವಾಗಿ 100 ಕೋಟಿ ಡಾಲರ್ ಹಣ ಬಂದಿದೆ. 2022-25ರ ಅವಧಿಯಲ್ಲಿ ಇದು ಮೂರು ಪಟ್ಟು ಹೆಚ್ಚಾಗುವ ಅಂದಾಜಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ದೇಶದಲ್ಲಿ ಈಗ 1000ಕ್ಕೂ ಹೆಚ್ಚು ನವೋದ್ಯಮಗಳು ಕೃಷಿ ಹಾಗೂ ಕೃಷಿ ಪೂರಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ. ಈ ಸಂಖ್ಯೆ ಕನಿಷ್ಠ ಇನ್ನೂ 10 ಪಟ್ಟು ಹೆಚ್ಚಾಗುವ ಅಗತ್ಯವಿದೆ. ಸಮೀಕ್ಷೆಗಳ ಪ್ರಕಾರ ದೇಶದಲ್ಲಿ 35 ಶತಕೋಟಿ ಡಾಲರ್ ಮೌಲ್ಯದಷ್ಟು ಕೃಷಿ ಉತ್ಪನ್ನಗಳ ಇ-ಮಾರಾಟಕ್ಕೆ ಅವಕಾಶವಿದೆ. ಸದ್ಯ ದೇಶದಲ್ಲಿ ಕೃಷಿ ಅವಲಂಬಿತರ ಸಂಖ್ಯೆಗೂ, ಅವರಿಂದ ಆಗುತ್ತಿರುವ ಉತ್ಪಾದಕತೆಗೂ ತುಂಬಾ ಅಂತರವಿದೆ. ಇಲ್ಲಿ ಶೇ 55ರಷ್ಟು ಜನ ಕೃಷಿ ಅವಲಂಬಿತರಾಗಿದ್ದರೂ ಜಾಗತಿಕ ಕೃಷಿ ವಹಿವಾಟಿಗೆ ನಮ್ಮ ಕೊಡುಗೆ ಶೇ 2.15ಕ್ಕಿಂತ ಕಡಿಮೆ ಇದ್ದರೆ, ಜಿಡಿಪಿ ಕೊಡುಗೆ ಶೇ 15ಕ್ಕಿಂತ ಕಡಿಮೆ ಇದೆ. ಈ ಪರಿಸ್ಥಿತಿ ಬದಲಾಗಿ, ಭಾರತವು ಹೈ-ಟೆಕ್ ನೆಲೆಯಾಗುವ ಜೊತೆಗೆ ಕೃಷಿ ತಾಂತ್ರಿಕತೆಯ ಪ್ರಶಸ್ತ ತಾಣವೂ ಆಗಬೇಕು ಎಂದರು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವರು ಹಾಜರಿದ್ದರು. ಈ ಕೃಷಿ ಮಹಾಮೇಳವು 4 ದಿನಗಳ ಕಾಲ ನಡೆಯಲಿದೆ.

LEAVE A REPLY

Please enter your comment!
Please enter your name here