ಬೆಂಗಳೂರು:
ರಾಜಗೋಪಾಲನಗರದಲ್ಲಿ ನಡೆಸುತ್ತಿದ್ದ ನಾರಾಯಣ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಕಾನೂನುಬಾಹಿರವಾಗಿ ಗರ್ಭಪಾತ ನಡೆಸುತ್ತಿರುವ ಬಗ್ಗೆ ಬಂದಂತ ದೂರುಗಳ ಹೆನ್ನೆಲೆಯಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ, (ಪಿಸಿಪಿಎನ್ ಡಿಟಿ) 1994ರಡಿ ಬೆಂಗಳೂರು ನಗರ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ನಡೆಸಿದ ತಪಾಸಣಾ ಭೇಟಿಯಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದುದರಿಂದ ಕೇಂದ್ರವನ್ನು ತಕ್ಷಣವೇ ಮುಚ್ವಿಸಿ ಸೀಲ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಆಯುಷ್ ವೈದ್ಯರು ತಲೆಮರೆಸಿಕೊಂಡಿದ್ದು, ಕೇಂದ್ರ ನಡೆಸಲು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ನೋಂದಣಿ ಕೂಡ ಪಡೆದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಇಂದು ನಡೆಸಿದ ಹಠಾತ್ ಭೇಟಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಈ ಕೇಂದ್ರದಲ್ಲಿ ವೈದ್ಯಕೀಯ ಗರ್ಭಪಾತ ಸಲಕರಣೆಗಳು, ಪೀಠೋಪಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.
ಪಿಸಿಪಿಎನ್ ಡಿಟಿ ಕಾಯ್ದೆಯ ವಿರುದ್ಧ ಕೆಲವು ಸ್ಕ್ಯಾನಿಂಗ್ ಕೇಂದ್ರಗಳು ಬ್ರೂಣಲಿಂಗ ಪತ್ತೆಯಲ್ಲಿ ತೊಡಗಿ ಇಂತಹ ಕೇಂದ್ರಗಳಲ್ಲಿ ಗರ್ಭಪಾತಕ್ಕೆ ಕಳುಹಿಸಿಕೊಡುವ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಹೆಣ್ಣು ಬ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರ ನಿರ್ದೇಶನದಂತೆ ಜಿಲ್ಲಾ ಸಮಿತಿಗಳು ಕಾಲಕಾಲಕ್ಕೆ ಈ ರೀತಿಯ ತಪಾಸಣಾ ಭೇಟಿಗಳನ್ನು ಕೈಗೊಂಡು ಉಲ್ಲಂಘನೆ ಸಂದರ್ಭದಲ್ಲಿ ಸೂಕ್ತ ಕ್ರಮವನ್ನು ಜರುಗಿಸುತ್ತಿದೆ ಎಂದು ಡಾ. ಶ್ರೀನಿವಾಸ್ ತಿಳಿಸಿದರು.
ಇದಕ್ಕೂ ಮುನ್ನ, ದಾಸರಹಳ್ಳಿಯಲ್ಲಿರುವ ವಿವೇಕ ಸ್ಕ್ಯಾನ್ಸ್ ಗೆ ಭೇಟಿ ನೀಡಿದ ತಂಡವು ಸ್ಕ್ಯಾನಿಂಗ್ ಕೊಠಡಿಯಲ್ಲಿ ನಿಯಮಕ್ಕೆ ವಿರುದ್ಧವಾಗಿ ಟಿವಿ ಮೂಲಕ ರೋಗಿಗೆ ಕಾಣುವಂತೆ ಬ್ರೂಣದ ಚಿತ್ರ ಬಿತ್ತರಪಡಿಸುತ್ತಿದ್ದನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದ ಡಾ. ಶ್ರೀನಿವಾಸ್, ಇಕ್ಕಟಿನ ಸ್ಥಳದಲ್ಲಿ ಕೇಂದ್ರವನ್ನು ನಡೆಸುತ್ತಿರುವ ಬಗ್ಗೆ ನೋಟಿಸ್ ನೀಡಿದರು.
ತಪಾಸಣಾ ಭೇಟಿಯಲ್ಲಿ ಸಮಿತಿ ಸದಸ್ಯರಾದ ಕೆ ಆರ್ ಪುರಂ ಸಾರ್ವಜನಿಕ ಆಸ್ಪತ್ರೆ ರೇಡಿಯಾಲಜಿಸ್ಟ್ ಡಾ. ಲೀಲಾ, ಡಾ. ವಿಜಯ್ ಸಾರಥಿ, ಡಾ. ಶಿಲ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಬೆಂಗಳುರು ಉತ್ತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್ ಹಾಗೂ ವಿಝನ್ ಬಿಂಗಳೂರು ಟ್ರಸ್ಟ್‌ನ ವಸಂತ ಕುಮಾರ್ ಅವರು ಉಪಸ್ಥಿತರಿದ್ದರು.