ಬೆಂಗಳೂರು:
ಆಸ್ಟ್ರೇಲಿಯಾದ ಉತ್ಕೃಷ್ಟ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬಂದರೆ ಅದಕ್ಕೆ ಸಕಲ ಸಹಕಾರ ಮತ್ತು ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸುಲ್ ಜನರಲ್ ಸಾರಾ ಕಿರ್ಲ್ಯೂ ನೇತೃತ್ವದಲ್ಲಿ ತಮ್ಮನ್ನು ಮಂಗಳವಾರ ಭೇಟಿಯಾದ ಆ ದೇಶದ ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ಅವರು ಈ ಭರವಸೆ ನೀಡಿದರು.
ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ರಾಜ್ಯದ ವಿಟಿಯು ಸೇರಿದಂತೆ ಯಾವುದೇ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಆಸಕ್ತಿ ತೋರಿದರೆ ಅದನ್ನು ಸ್ವಾಗತಿಸಲಾಗುವುದು. ಹಾಗೆಯೇ, ರಾಜ್ಯದ ವಿ.ವಿ.ಗಳೊಂದಿಗೆ ಕೈಜೋಡಿಸಿ ಉತ್ಕೃಷ್ಟತಾ ಕೇಂದ್ರಗಳನ್ನು ತೆರೆದರೆ ಅದಕ್ಕೂ ಆದ್ಯತೆ ಕೊಡಲಾಗುವುದು ಎಂದು ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದೇವೆ. ಇದಕ್ಕೆ ತಕ್ಕಂತೆ ನಮ್ಮಲ್ಲಿ ತರಬೇತಿದಾರರನ್ನು ಜಾಗತಿಕ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸುವಂತಹ ಪರಿಣತ ತರಬೇತಿದಾರರು (ಮಾಸ್ಟರ್ ಟ್ರೈನರ್ಸ್) ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಆಸ್ಟ್ರೇಲಿಯಾದ ಸಹಕಾರ ಅಗತ್ಯವಿದೆ ಎಂದು ಸಚಿವರು ನಿಯೋಗವನ್ನು ಕೋರಿದರು.
ಆಸ್ಟ್ರೇಲಿಯಾವು ರಾಜ್ಯದ ಐಐಎಸ್ಸಿ, ರಾಮನ್ ಸಂಶೋಧನಾ ಸಂಸ್ಥೆ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ, ಇಸ್ರೋ, ಭಾರತೀಯ ಭೌತ ವಿಜ್ಞಾನ ಸಂಸ್ಥೆ ಸೇರಿದಂತೆ ಹತ್ತಾರು ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಹೊಂದಿರುವುದನ್ನು ನಿಯೋಗವು ಈ ಸಂದರ್ಭದಲ್ಲಿ ಸಚಿವರಿಗೆ ವಿವರಿಸಿತು.
ಸ್ಟಾರ್ಟ್ ಅಪ್ ವಲಯ: ಸಹಕಾರ ನೀಡಲು ಸಿದ್ಧ
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ನಿಯೋಗವು ಕರ್ನಾಟಕದಲ್ಲಿ ಸಮರ್ಥವಾಗಿರುವ ಸ್ಟಾರ್ಟ್ ಅಪ್ ವಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಹಕಾರವನ್ನು ಕೋರಿತು.
ಇದಕ್ಕೆ ಸ್ಪಂದಿಸಿದ ಸಚಿವರು, `ರಾಜ್ಯದಲ್ಲಿ ತಂದಿರುವ ಹತ್ತಾರು ಸೂಕ್ತ ಮತ್ತು ಪರಿಣಾಮಕಾರಿ ನೀತಿಗಳು ಇಲ್ಲಿ ನವೋದ್ಯಮಗಳ ಬೆಳವಣಿಗೆಯನ್ನು ಸಾಧ್ಯವಾಗಿಸಿವೆ. ಈ ಕ್ಷೇತ್ರದಲ್ಲಿ ಸ್ಥಳೀಯ ಮೂಲದ ನವೋದ್ಯಮಗಳ ಪಾಲೂ ದೊಡ್ಡದಿದೆ. ಈ ವಲಯದಲ್ಲಿ ರಾಜ್ಯವು ಆಸ್ಟ್ರೇಲಿಯಾಗೆ ಅಗತ್ಯ ನೆರವು ನೀಡಲು ಸಿದ್ಧವಿದ್ದು, ಸದ್ಯದಲ್ಲೇ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.
In 2020, our PM Shri @narendramodi ji and the Australian PM had decided on a strategic partnership between the countries in specific areas like cyber security.
— Dr. Ashwathnarayan C. N. (@drashwathcn) October 26, 2021
Happy to see Australia considering Karnataka as a key state for partnering in the country.
ಇದಲ್ಲದೆ, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಮತ್ತು ವಿಕ್ಟೋರಿಯಾ ಪ್ರಾಂತ್ಯದೊಂದಿಗೆ ಆರೋಗ್ಯ ಸೇವೆ ಮತ್ತು ಜೈವಿಕ ತಂತ್ರಜ್ಞಾನ (ಬಿ.ಟಿ.) ಕ್ಷೇತ್ರಗಳಲ್ಲಿ ಕೂಡ ರಾಜ್ಯಕ್ಕೆ ಲಾಭ ಪಡೆದುಕೊಳ್ಳಲು ಮಾತುಕತೆಯ ಸಂದರ್ಭದಲ್ಲಿ ಅವರು ವಿವರವಾಗಿ ಚರ್ಚಿಸಿದರು.
ಸೈಬರ್ ಸೆಕ್ಯುರಿಟಿ ವಲಯದಲ್ಲಿ ಆಸ್ಟ್ರೇಲಿಯಾದೊಂದಿಗೆ ಈಗಾಗಲೇ ಇರುವ ಸಹಕಾರವನ್ನು `ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಮುಂದುವರಿಸಿಕೊಂಡು ಹೋಗಲಾಗುವುದು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾದ ಅಗತ್ಯಗಳನ್ನು ರಾಜ್ಯ ಸರಕಾರವು ಗಣನೆಗೆ ತೆಗೆದುಕೊಂಡು, ಮುಂದಡಿ ಇಡಲಿದೆ ಎಂದು ಅವರು ನುಡಿದರು.
ಮಾತುಕತೆಯಲ್ಲಿ ಆಸ್ಟ್ರೇಲಿಯಾದ ವಾಣಿಜ್ಯ ಮತ್ತು ಹೂಡಿಕೆ ಆಯೋಗದ ಕಮಿಷನರ್ ಸ್ಯಾಮ್ ಫ್ರೀಮ್ಯಾನ್, ಆಸ್ಟ್ರೇಲಿಯನ್ ಕಾನ್ಸುಲೇಟ್ ಜನರಲ್ ನ ಉಪ ಕಾನ್ಸಲ್ ಆಂಡ್ರ್ಯೂ ಕಾಲಿಸ್ಟರ್, ರಾಜ್ಯ ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಉಪಸ್ಥಿತರಿದ್ದರು.