ಬೆಂಗಳೂರು:
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ, ತಮಗೆ ಅಧಿಕಾರ ದೊರೆಯಲು ಮುಖ್ಯ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸೌಲಭ್ಯ ದೊರಕಿಸಿ ಕೊಟ್ಟಿದ್ದಾರೆ.
ಈ ಸಂಬಂಧ ಆಡಳಿತ ಮತ್ತು ಸುಧಾರಣೆ ಇಲಾಖೆ ಇಂದು ಅಧಿಸೂಚನೆ ಹೊರಸಿದೆ. ಇದರ ಪ್ರಕಾರ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿ ಇರುವವರೆಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನ ಅಬಾಧಿತವಾಗಿ ಮುಂದುವರಿಯಲಿದೆ.
ಇದಲ್ಲದೆ ತಿಂಗಳಿಗೆ ಮೂರು ಲಕ್ಷ ರೂ ಭತ್ಯೆ, ಜೊತೆಗೆ ಒಂದು ಲಕ್ಷ ರೂಪಾಯಿ ಬಾಡಿಗೆ ಹಾಗೂ ಸಾರಿಗೆಭತ್ಯೆ ಪಡೆಯಲು ಯಡಿಯೂರಪ್ಪನವರು ಅರ್ಹರಾಗಿರುತ್ತಾರೆ.
ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ಆಗಿನ ಮಂತ್ರಿಯಾಗಿದ್ದ ಎಚ್ . ಡಿ. ಕುಮಾರಸ್ವಾಮಿ ಅವರು ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಸೌಲಭ್ಯ ಕಲ್ಪಿಸಿ ಕೊಟ್ಟಿರಲಿಲ್ಲ. ಲಾಭದಾಯಕ ಹುದ್ದೆ, ಕಾಯ್ದೆ ಅಡ್ಡಿ ಬರಬಹುದು ಎಂಬ ಕಾರಣಕ್ಕಾಗಿ ಆಗಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಅವರಿಗೆ ಇಂತಹ ಅವಕಾಶ ಮಾಡಿಕೊಟ್ಟಿರಲಿಲ್ಲ.