ಬೆಂಗಳೂರು:
ಜಯನಗರದ ಸರ್ಕಾರಿ ಜನರಲ್ ಆಸ್ಪತ್ರೆಗೆ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದಿನೇಶ್ ಗುಂಡೂರಾವ್ ರಾವ್ ಜೊತೆ ಆಸ್ಪತ್ರೆ ಪರೀಶಿಲನೆಗೆ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಕೂಡ ಜೊತೆಗಿದ್ದರು.
ಸರಕಾರದಿಂದ ಆಸ್ಪತ್ರೆಗೆ ಹಣ ಮಂಜೂರು ಮಾಡದಿದ್ದರೆ ಆವರಣ ಏಕೆ ಸ್ವಚ್ಛವಾಗಿಲ್ಲ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ಸಮಸ್ಯೆಗಳು ಕಂಡು ಬಂದಲ್ಲಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಣವನ್ನು ಒದಗಿಸಲಾಗಿದೆ ಆದರೆ ಆವರಣವನ್ನು ಸ್ವಚ್ಛವಾಗಿಡಲು ತೊಡಗಿರುವ ಖಾಸಗಿ ಏಜೆನ್ಸಿ ಕೆಲಸ ಆರಂಭಿಸಿಲ್ಲ ಎಂದು ಸಿಬ್ಬಂದಿಯೊಬ್ಬರು ವಿವರಿಸಲು ಪ್ರಯತ್ನಿಸಿದಾಗ, ಅಲ್ಲಿಯವರೆಗೆ ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಲ್ಲವೇ? ಎಂದು ಗುಂಡೂರಾವ್ ಆಸ್ಪತ್ರೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅವರು ವಾರ್ಡ್‌ಗಳಲ್ಲಿ ಸಂಚರಿಸಿ ಕೆಲವು ಒಳರೋಗಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ತಪಾಸಣೆ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗುಂಡೂರಾವ್, ಆಸ್ಪತ್ರೆಗಳ ವಿರುದ್ಧ ಸಾಕಷ್ಟು ದೂರುಗಳಿವೆ. ವೈದ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ, ರೋಗಿಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿಲು ಸೂಚಿಸಿದರು. ಆಸ್ಪತ್ರೆಯ ಸ್ಥಿತಿಗತಿಗಳ ಕುರಿತು ಖುದ್ದು ಮಾಹಿತಿ ಪಡೆಯಲು ನಿರ್ಧರಿಸಿರುವ ಅವರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂಗಾಂಗ ಕಳವು ಮತ್ತು ಅನಾಥ ಶವಗಳ ಮಾರಾಟಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಿರುವವರು ಅಗತ್ಯ ಸಾಕ್ಷ್ಯಗಳನ್ನು ಸಲ್ಲಿಸಬಹುದು ಮತ್ತು ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ಜಯನಗರ ಸಾರ್ವಜನಿಕರ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಕೊರತೆಯಿದೆ. ಎಕ್ಸ್ರೇ 3 ಜನ ಡಿಪಾರ್ಟ್ ಮೆಂಟ್‌ನಲ್ಲಿ 3 ಸ್ಟಾಪ್ಸ್‌ಗಳಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಕಳೆದ 2 ವರ್ಷದಿಂದ ಸೀನಿಯರ್ ಎಕ್ಸ್ ರೇ ಟೆಕ್ನಿಷಿಯನ್ ಪೋಸ್ಟ್ ಖಾಲಿಯಿದೆ. ಕೇವಲ 3 ಜನ ಸಿಬ್ಬಂದಿಗಳಿಂದ ಕೆಲಸ ನಿರ್ವಹಿಸಲು ಕಷ್ಟ ಎಂದು ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಕಟ್ಟಡ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.