ಬೆಂಗಳೂರು: ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಕಟ್ಟಡ ಹಾಗೂ ಸ್ಥಳಗಳಿಗೆ ಜೀವಂತವಾಗಿರುವ ರಾಜಕಾರಣಿಗಳ ಹೆಸರಗಳು ನಾಮಕರಣ ಮಾಡುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ದಾವಣಗೆರೆ ನಿವಾಸಿ ವಕೀಲ ಎ.ಸಿ. ರಾಘವೇಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ದಾವಣಗೆರೆಯಲ್ಲಿ ಪಾರ್ಕ್, ಬಸ್ ನಿಲ್ದಾಣ, ಜಿ.ಪಂ ಸಭಾಂಗಣ ಮತ್ತಿತರ ಸರ್ಕಾರಿ ಕಟ್ಟಡಗಳಿಗೆ ಸ್ಥಳೀಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ನಾಮಕರಣ ಮಾಡಿರುವುದನ್ನು ಅರ್ಜಿಯಲ್ಲಿ ವಿರೋಧ ವ್ಯಕ್ತಪಡಿಸಲಾಗಿದೆ. ಪ್ರತಿವಾದಿಗಳಾಗಿರುವ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ದಾವಣಗೆರೆ ಜಿಲ್ಲಾಧಿಕಾರಿ, ದಾವಣಗೆರೆ ನಗರ ಸಭೆ, ದಾವಣಗೆರೆ ಜಿಲ್ಲಾಪಂಚಾಯತಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಸರ್ಕಾರದ ಅನುದಾನಲ್ಲಿ ಕಟ್ಟಲಾದ ಸರ್ಕಾರಿ ಕಟ್ಟಡಗಳಿಗೆ ಜೀವಂತ ರಾಜಕಾರಣಿಗಳ ಹೆಸರು ಇಡಬಾರದು ಎಂದು 2012ರಲ್ಲಿ ಇದೇ ಹೈಕೋರ್ಟ್ ಆದೇಶವೊಂದನ್ನು ನೀಡಿದೆ. ಚನ್ನಗಿರಿ ಮಾಜಿ ಶಾಸಕ ಮಾಡಳು ವಿರೂಪಾಕ್ಷಪ್ಪ ಅವರ ಹೆಸರನ್ನು ತಾಲೂಕು ಕ್ರೀಡಾಂಗಣಕ್ಕೆ ಇಡಲಾಗಿತ್ತು. ಸರ್ಕಾರದ ಅನುದಾನದಲ್ಲಿ ಕಟ್ಟಲಾದ ಆಟದ ಮೈದಾನಕ್ಕೆ ಸನ್ಮಾನ್ಯ ಮಾಡಾಳು ವಿರೂಪಾಕ್ಷಪ್ಪ ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆಗ ಹೈಕೋರ್ಟ್ ಆದೇಶದಂತೆ ಮಾಡಾಳು ವಿರೂಪಾಕ್ಷಪ್ಪ ಆಟದ ಮೈದಾನದ ಹೆಸರು ಬದಲಾಯಿಸಿ ತಾಲೂಕು ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು.
ಅದೇ ರೀತಿ ದಾವಣಗೆರೆಯಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಲಾದ ಅನೇಕ ಕಟ್ಟಡಗಳು, ಪಾರ್ಕ್, ಬಸ್ ನಿಲ್ದಾಣ, ರಸ್ತೆಗಳಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರಗಳನ್ನು ಇಡಲಾಗಿದೆ. ಇದನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿದರು.ವಾದ ಆಲಿಸಿದ ಕೋರ್ಟ್ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.