Home ರಾಜಕೀಯ Lok Sabha Election 2024: One name recommended for 75% constituencies | 75%...

Lok Sabha Election 2024: One name recommended for 75% constituencies | 75% ಕ್ಷೇತ್ರಗಳಿಗೆ ಒಬ್ಬರ ಹೆಸರು ಶಿಫಾರಸ್ಸು: ಡಿಸಿಎಂ ಡಿ.ಕೆ. ಶಿವಕುಮಾರ್

14
0
Lok Sabha Election 2024: One name recommended for 75% constituencies

ಬೆಂಗಳೂರು, ಮಾರ್ಚ್ 11: “ಲೋಕಸಭೆ ಚುನಾವಣೆ ಸಂಬಂಧ ಇಂದು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆ ಮಾಡಲಾಗಿದ್ದು, 75%ರಷ್ಟು ಕ್ಷೇತ್ರಗಳಲ್ಲಿ ಒಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯ ಇಂದಿರಾಗಾಂಧಿ ಭವನದಲ್ಲಿ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಕುಮಾರ್ ಅವರು: “ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾಯವಾಗಿದ್ದು ಲೋಕಸಭೆ ಅಭ್ಯರ್ಥಿಗಳ ಹೆಸರುಗಳನ್ನು ಚರ್ಚಿಸಿದ್ದೇವೆ. ಕೆಲವು ಕಡೆಗಳಲ್ಲಿ ಒಬ್ಬರ ಹೆಸರು ಚರ್ಚೆಯಾದರೆ ಮತ್ತೆ ಕೆಲವೆಡೆ ಹಲವು ಹೆಸರು ಚರ್ಚೆಯಾಗಿದೆ,” ಎಂದರು.

ಇಂದು ಚರ್ಚೆಯಾದ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಗೆ ರವಾನಿಸುತ್ತೇವೆ. ಇದೇ 14ರ ನಂತರ ದೆಹಲಿಯಲ್ಲಿ ನಡೆಯುವ ಸಭೆಗೆ ನಾನು ಹಾಗೂ ಮುಖ್ಯಮಂತ್ರಿಗಳು ಹೋಗಿ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಮ್ಮ ಅಭಿಪ್ರಾಯ ಏನೇ ಇರಬಹುದು ಅಂತಿಮವಾಗಿ ನಮ್ಮ ಹೈಕಮಾಂಡ್ ನಾಯಕರು, ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಸಮಿತಿ ತೀರ್ಮಾನ ಮಾಡಲಿದೆ.”

ಎಷ್ಟು ಕ್ಷೇತ್ರಗಳಲ್ಲಿ ಒಬ್ಬರ ಹೆಸರು ಶಿಫಾರಸ್ಸು ಮಾಡಲಾಗಿದೆ ಎಂದು ಕೇಳಿದಾಗ, “ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಬಹುತೇಕ 75% ಕ್ಷೇತ್ರಗಳಲ್ಲಿ ಒಬ್ಬರ ಹೆಸರು ಶಿಫಾರಸ್ಸು ಮಾಡಿದ್ದೇವೆ” ಎಂದು ತಿಳಿಸಿದರು.

ಬಿಜೆಪಿ ಧ್ವನಿಯನ್ನೇ ಅನಂತ ಕುಮಾರ್ ಹೆಗಡೆ ಹೊರಹಾಕಿದ್ದಾರೆ: ಅನಂತ ಕುಮಾರ್ ಹೆಗಡೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸಂವಿಧಾನ ಬದಲಿಸಲು ಬಿಜೆಪಿ 400 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ನೀಡಿರುವ ಹೇಳಿಕೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಇದ್ದಾಗ ನೀಡಿರುವ ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಪವಿತ್ರವಾದ ಗ್ರಂಥ. ಸಂವಿಧಾನ ಇಲ್ಲದೆ ದೇಶದ ರಕ್ಷಣೆ ಅಸಾಧ್ಯ. ಈ ಸಂವಿಧಾನದ ಮೂಲಕ ಎಲ್ಲಾ ವರ್ಗದವರ ರಕ್ಷಣೆ ಮಾಡಲಾಗುತ್ತಿದೆ. ಇದನ್ನು ಬದಲಿಸಲು ಶಕ್ತಿ ಕೊಡಿ ಎಂದು ಬಿಜೆಪಿ ಕೇಳುತ್ತಿರುವುದು, ಇದನ್ನು ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಬಿಜೆಪಿ ಅವರ ವಿರುದ್ಧ ಯಾವ ಕ್ರಮ ಜರುಗಿಸಿದೆ. ಅವರನ್ನು ಉಚ್ಚಾಟಿಸಿದ್ದಾರಾ? ಇದು ಬಿಜೆಪಿಯ ಧ್ವನಿ. ರಾಜ್ಯ ಹಾಗೂ ದೇಶದಲ್ಲಿ ಇದನ್ನು ಖಂಡಿಸಿ, ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕು” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here