ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧ ತಮ್ಮ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿದ ಎಫ್‌ಐಆರ್ ರದ್ದು ಕೋರಿ ಅನಂತ ಕುಮಾರ್ ಹೆಗಡೆ (MP Ananth Kumar Hegde) ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಅರ್ಜಿದಾರರ ಭಾಷೆ ಬಳಕೆಯ ಕುರಿತು ಕಿಡಿಕಾರಿದೆ.
ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ. ಅವರಿಗೆ ಗೌರವ ನೀಡಬೇಕಾದದ್ದು ಅಗತ್ಯ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ. ಅವರ ಕಾರ್ಯ ನೀತಿ ನಿಮಗೆ ಇಷ್ಟವಾಗದೆ ಇರಬಹುದು ಆ ಕುರಿತು ಸರಿಯಾದ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಬಹುದು. ಕೀಳುಭಾಷೆ, ಪದಬಳಕೆಯ ಬಗ್ಗೆ ಎಚ್ಚರವಿರಲಿ ಎಂದು ಖಾರವಾಗಿ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ.
ಅಯೋಧ್ಯೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅನಂತಕುಮಾರ್ ಹೆಗಡೆ, ‘ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ’ ಎಂದು ನಿಂದಿಸಿದ್ದರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಆದರೆ ಜ. 22 ಕ್ಕೆ ಹೋಗಲ್ಲ, ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಎಂದು ಹೆಗಡೆ ಹೇಳಿದ್ದರು.
ರಾಮಮಂದಿರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.