ಏಪ್ರಿಲ್ 1ರಿಂದ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ವಾಹನಗಳಿಗೆ ಹೊಸ ನಿಯಮಗಳು ಜಾರಿ: ಸಾರಿಗೆ ಆಯುಕ್ತ ಯೋಗೀಶ
ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಮಾರ್ಗಸೂಚಿಯಂತೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ (AITP) ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಸಾರಿಗೆ ಆಯುಕ್ತ ಯೋಗೀಶ ತಿಳಿಸಿದ್ದಾರೆ. ಈ ನಿಯಮಗಳು ಏಪ್ರಿಲ್ 1, 2026ರಿಂದ ಜಾರಿಗೆ ಬಂದಿವೆ.
ಹೊಸ ನಿಯಮಗಳ ಪ್ರಕಾರ, AITP ವಾಹನಗಳಲ್ಲಿ ಪ್ರಯಾಣಿಕರ ಮಿತಿ ನಿಗದಿಪಡಿಸಲಾಗಿದ್ದು, ದೊಡ್ಡ ವಾಹನಗಳಲ್ಲಿ ಗರಿಷ್ಠ 90 ಪ್ರಯಾಣಿಕರು ಹಾಗೂ ಸಣ್ಣ ವಾಹನಗಳಲ್ಲಿ 60 ಪ್ರಯಾಣಿಕರ ಮಿತಿಯನ್ನು ಪಾಲಿಸಬೇಕು.

ಎಲ್ಲಾ ವಾಹನಗಳಲ್ಲಿ GPS ಟ್ರ್ಯಾಕಿಂಗ್ ವ್ಯವಸ್ಥೆ ಕಡ್ಡಾಯವಾಗಿದ್ದು, Command and Control Centre ಮೂಲಕ ವಾಹನಗಳ ಚಲನವಲನವನ್ನು ನಿಗಾ ವಹಿಸಲಾಗುತ್ತದೆ.
ನಿಯಮ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ, ವಾಹನಗಳ ನಿರ್ವಹಣೆ ಹಾಗೂ ಸೇವಾ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಈ ಕ್ರಮಗಳು ಪ್ರವಾಸಿ ವಾಹನಗಳ ಕಾರ್ಯಾಚರಣೆಯನ್ನು ಶಿಸ್ತುಬದ್ಧಗೊಳಿಸಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಲಿವೆ ಎಂದು ಸಾರಿಗೆ ಆಯುಕ್ತ ಯೋಗೀಶ ತಿಳಿಸಿದ್ದಾರೆ.
—
