69ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ದಕ್ಷಿಣ ಆಫ್ರಿಕಾ ಸ್ಪೀಕರ್ ಥೋಕೊ ದಿದಿಜಾ ಅವರಿಗೆ ‘A Brochure on Karnataka’ ಹಸ್ತಾಂತರಿಸಿದ ಕರ್ನಾಟಕ ವಿಧಾನಮಂಡಲ ನಿಯೋಗ
ಬೆಂಗಳೂರು: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಯುತ್ತಿರುವ 69ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದ (CPC) ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಮಂಡಲದ ನಿಯೋಗವು ದಕ್ಷಿಣ ಆಫ್ರಿಕಾ ಗಣರಾಜ್ಯದ ರಾಷ್ಟ್ರೀಯ ಸಭೆಯ ಸ್ಪೀಕರ್ ಥೋಕೊ ದಿದಿಜಾ ಅವರಿಗೆ ‘A Brochure on Karnataka’ ಎಂಬ ವಿಶೇಷ ಕಿರುಹೊತ್ತಿಗೆಯನ್ನು ಹಸ್ತಾಂತರಿಸಿತು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್ ನೇತೃತ್ವದ ನಿಯೋಗವು ಸಮ್ಮೇಳನದಲ್ಲಿ ಭಾಗವಹಿಸಿದೆ.
ಕರ್ನಾಟಕದ ಸಂಸದೀಯ ಪರಂಪರೆ, ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ವೈಭವ ಹಾಗೂ ರಾಜ್ಯದ ಅಭಿವೃದ್ಧಿ ಸಾಧನೆಗಳನ್ನು ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಿರುಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ವಿಧಾನಮಂಡಲದ ಪರವಾಗಿ ಸಂಸದೀಯ ಸ್ನೇಹ ಮತ್ತು ಸೌಹಾರ್ದದ ಸಂಕೇತವಾಗಿ ಇದನ್ನು ದಕ್ಷಿಣ ಆಫ್ರಿಕಾ ಸಂಸತ್ತಿಗೆ ಅರ್ಪಿಸಲಾಯಿತು.
‘ಬದಲಾಗುತ್ತಿರುವ ವಿಶ್ವ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು: ಕಾಮನ್ವೆಲ್ತ್ ನಾಯಕತ್ವ’ ಎಂಬ ಧ್ಯೇಯದಡಿ 69ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನ ನಡೆಯುತ್ತಿದೆ.
ಕಾಮನ್ವೆಲ್ತ್ನ ಒಂಬತ್ತು ಭೌಗೋಳಿಕ ಪ್ರದೇಶಗಳಿಂದ ಸಭಾಧ್ಯಕ್ಷರು, ಸಭಾಪತಿಗಳು ಹಾಗೂ ಸಂಸದರು ಸೇರಿದಂತೆ 800ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂದು ಕರ್ನಾಟಕ ವಿಧಾನಮಂಡಲ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಸಮ್ಮೇಳನದ ಅಂಗವಾಗಿ ನಡೆಯುತ್ತಿರುವ ವಿವಿಧ ಕಾರ್ಯಾಗಾರಗಳು ಮತ್ತು ಚರ್ಚಾಗೋಷ್ಠಿಗಳಲ್ಲೂ ಕರ್ನಾಟಕದ ನಿಯೋಗ ಭಾಗವಹಿಸಿದೆ.
ಅಂತರ್-ಸಂಸದೀಯ ವಿಷಯಗಳು, ಆರ್ಥಿಕತೆ ಮತ್ತು ವ್ಯಾಪಾರ, ಕೃತಕ ಬುದ್ಧಿಮತ್ತೆಯ (AI) ಬಳಕೆ, ಮಾನವ ಹಕ್ಕುಗಳು, ಶಾಂತಿ ಸ್ಥಾಪನೆ, ಹವಾಮಾನ ಬದಲಾವಣೆ ಹಾಗೂ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವಲ್ಲಿ ಸಂಸದೀಯ ನಾಯಕತ್ವ ಸೇರಿದಂತೆ ಹಲವು ವಿಷಯಗಳ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ನಿಯೋಗ ಪಾಲ್ಗೊಂಡಿದೆ.
ಕಾಮನ್ವೆಲ್ತ್ನ ವಿವಿಧ ಭಾಗಗಳ ಶಾಸಕರು ಮತ್ತು ಪೀಠಾಸೀನ ಅಧಿಕಾರಿಗಳಿಗೆ ಸಂಸದೀಯ ಪ್ರಜಾಪ್ರಭುತ್ವ ಹಾಗೂ ಸಮಕಾಲೀನ ಸವಾಲುಗಳ ಕುರಿತು ಅಭಿಪ್ರಾಯ ವಿನಿಮಯಕ್ಕೆ ಸಮ್ಮೇಳನ ವೇದಿಕೆ ಒದಗಿಸಿದ್ದು, ಕರ್ನಾಟಕದ ನಿಯೋಗವು ರಾಜ್ಯದ ಶಾಸಕಾಂಗ ಪರಂಪರೆ ಮತ್ತು ಆಡಳಿತ ಅನುಭವವನ್ನು ಅಂತರರಾಷ್ಟ್ರೀಯ ಪ್ರತಿನಿಧಿಗಳ ಮುಂದೆ ಪರಿಚಯಿಸುತ್ತಿದೆ.
