ಚಿತ್ರದುರ್ಗ:
ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ವೆಚ್ಚ ಮಾಡದ ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ತರಾಟೆ ತೆಗೆದುಕೊಂಡರು. ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಚಿವರು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ಹರಸಾಹಸದಿಂದ ಬಿಡುಗಡೆ ಮಾಡಿಸಿದ್ದೇನೆ. ಆದರೆ ಜಿಲ್ಲೆಯಲ್ಲಿ ಮಾತ್ರ ಅನುದಾನವೇ ವೆಚ್ಚವಾಗುತ್ತಿಲ್ಲ ಎಂದು ಸಚಿವರು ಗರಂ ಆದರು.
ಅಚ್ಚರಿಗೊಳಗಾದ ಶಾಸಕರು
ಶಾಸಕರು, ನಾವು ಎಲ್ಲ ಅನುದಾನಕ್ಕೂ ಕ್ರಿಯಾಯೋಜನೆ ನೀಡಿದ್ದೇವೆ. ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಆದರೆ ಅನುದಾನವೇ ಬಳಕೆಯಾಗಿಲ್ಲ ಎಂದು ದಾಖಲೆಯಲ್ಲಿ ತೋರಿಸುತ್ತಿರುವುದಕ್ಕೆ ಅಚ್ಚರಿಪಟ್ಟರು. ದಾಖಲೆ ಪ್ರಕಾರ ಅನುದಾನದ ಬಳಕೆ ಶೇ.1 ರಷ್ಟೂ ಖರ್ಚಾಗಿಲ್ಲ. ಕಾಮಗಾರಿ ಮುಗಿಸಿ, ಅಪ್ರೂವ್ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದೇ ಈ ಸಮಸ್ಯೆ ಕಾರಣ ಎಂದು ಸಚಿವರು ವಿವರಿಸಿದರು. ಇನ್ನು ಮುಂದೆ ಈ ಲೋಪವಾಗದಂತೆ ಅಧಿಕಾರಿಗಳನ್ನು ಎಚ್ಚರಿಸುತ್ತೇವೆ ಎಂದು ಶಾಸಕರು ತಿಳಿಸಿದರು. ಅಲ್ಲದೆ 2 ತಿಂಗಳೊಳಗೆ ವೆಚ್ಚಭರಿಸಬೇಕು ಎಂದು ಸಚಿವ ನಾರಾಯಣಗೌಡ ಸೂಚಿಸಿದರು. ಒಟ್ಟು ರೂ. 24.94 ಕೋಟಿ ಅನುದಾನ ವೆಚ್ಚವಾಗದೆ ಉಳಿದಿದೆ. ತಕ್ಷಣ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ
ಸಾಮಾನ್ಯವಾಗಿ ಯೋಜನಾ ಇಲಾಖೆ ಮುಖ್ಯಮಂತ್ರಿಗಳ ಬಳಿ ಇರುತ್ತಿತ್ತು. ಸಮಯದ ಅಭಾವದಿಂದ ಸರಿಯಾಗಿ ಎಲ್ಲವನ್ನು ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಮುಖ್ಯಮಂತ್ರಿಗಳು ಇಲಾಖೆಯನ್ನು ನನಗೆ ನೀಡಿ ಜವಾಬ್ದಾರಿ ವಹಿಸಿದ್ದಾರೆ. ಹೀಗಾಗಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಪ್ರತಿ ಜಿಲ್ಲೆಗೆ ತೆರಳಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಕೂಲಂಕುಷವಾಗಿ ಎಲ್ಲವನ್ನು ಗಮನಿಸುತ್ತೇನೆ. ಅನುದಾನ ಬಿಡುಗಡೆಗೂ ಶ್ರಮಿಸುತ್ತೇನೆ. ಅದೇ ರೀತಿ ಅನುದಾನ ಬಳಕೆಯನ್ನು ಗಮನಿಸುತ್ತೇನೆ. ಅಧಿಕಾರಿಗಳು ಅನುದಾನ ಬಿಡುಗಡೆಯಲ್ಲಿ ಅಥವಾ ಕಾಮಗಾರಿಯಲ್ಲಿ ಲೋಪವೆಸಗಿದರೆ ಮುಲಾಜಿಲ್ಲದೆ ಕ್ರಮತೆಗೆದುಕೊಳ್ಳುತ್ತೇನೆ ಎಂದು
ಎಚ್ಚರಿಕೆ ನೀಡಿದರು.
ಕೃಷಿ ಹೊಂಡಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಹಾಗೂ ಸಂಪೂರ್ಣ ಮಾಹಿತಿಯನ್ನು ಶಾಸಕರಿಗೆ ನೀಡಬೇಕು. ಹೊಂಡ ತೆಗೆದು ಒಂದೇ ವರ್ಷದಲ್ಲಿ ಮುಚ್ಚುತ್ತಾರೆ. ಫಲಾನುಭವಿಗಳ ಆಯ್ಕೆಯಲ್ಲೂ ಅಕ್ರಮ ನಡೆಯುತ್ತದೆ. ಶಾಸಕರ ಗಮನಕ್ಕೆ ಇಲ್ಲದೆ ಫಲಾನುಭವಿಗಳ ಆಯ್ಕೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕ್ರೀಡಾಂಗಣಗಳ ಅಭಿವೃದ್ಧಿಗೆ ಡಿಎಂಎಫ್ ಅನುದಾನ ಬಳಸುವಂತೆ ಸೂಚಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಬಂದ್ ಆಗಿದ್ದ ಕಾರಣ ನಿರ್ವಹಣೆ ಸರಿಯಾಗಿಲ್ಲ. ತಕ್ಷಣ ಈಜುಕೊಳ, ಕ್ರೀಡಾಂಗಣಗಳ ದುರಸ್ಥಿ ಕಾರ್ಯ ಮುಗಿಸಿ, ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2020-21 ನೇ ಸಾಲಿನ 734 ಕಾಮಗಾರಿಗಳು ಪ್ರಾರಂಭಿಸಬೇಕಿದ್ದು, ತಕ್ಷಣವೇ ಪ್ರಾರಂಭಿಸುವಂತೆ ಸೂಚಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ತಿಪ್ಪಾರೆಡ್ಡಿ, ರಘುಮೂರ್ತಿ, ಪೂರ್ಣಿಮಾ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರುಜೀವನಮೂರ್ತಿ, ಎಡಿಸಿ ಬಾಲಕೃಷ್ಣ, ಜಿಲ್ಲಾ ಪಂಚಾಯತ್ ಸಿಇಓ ನಂದಿನಿದೇವಿ, ಇಲಾಖೆ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.