Home ರಾಜಕೀಯ ಕೇಂದ್ರ ಸಚಿವ ಸಂಪುಟದಲ್ಲಿ ಒಬಿಸಿಗೆ ವಿಶೇಷ ಆದ್ಯತೆ- ಪ್ರಧಾನಿಯವರಿಗೆ ನೆ.ಲ.ನರೇಂದ್ರ ಬಾಬು ಕೃತಜ್ಞತೆ

ಕೇಂದ್ರ ಸಚಿವ ಸಂಪುಟದಲ್ಲಿ ಒಬಿಸಿಗೆ ವಿಶೇಷ ಆದ್ಯತೆ- ಪ್ರಧಾನಿಯವರಿಗೆ ನೆ.ಲ.ನರೇಂದ್ರ ಬಾಬು ಕೃತಜ್ಞತೆ

53
0

ಬೆಂಗಳೂರು:

ಕೇಂದ್ರದಲ್ಲಿ ಮಂತ್ರಿಮಂಡಲ ವಿಸ್ತರಣೆ ವೇಳೆ ಇತರ ಹಿಂದುಳಿದ ಜಾತಿಗೆ (ಒಬಿಸಿ) ಕೊಟ್ಟಿರುವ ಆದ್ಯತೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಸ್ವಾತಂತ್ರ್ಯ ಬಂದ ಬಳಿಕ ಈ ಮಾದರಿಯಲ್ಲಿ ಗರಿಷ್ಠ ಸ್ಥಾನ ನೀಡಿರುವ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ಮಾಜಿ ಶಾಸಕರೂ ಆದ ಶ್ರೀ ನೆ.ಲ.ನರೇಂದ್ರಬಾಬು ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಒಟ್ಟು ಜನಸಂಖ್ಯೆಯ ಶೇ 52ಕ್ಕೂ ಹೆಚ್ಚು ಭಾಗ ಜನರು ಹಿಂದುಳಿದ ವರ್ಗದವರೇ ಆಗಿದ್ದಾರೆ. ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರವು ಸಮಪಾಲು, ಸಮಬಾಳ್ವೆ, ಸಮಾನ ಅವಕಾಶದ ಚಿಂತನೆಯನ್ನು ಸಾಕಾರಗೊಳಿಸಿದೆ. ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆಗೆ ಹೆಚ್ಚಿನ ಅರ್ಥ ಬಂದಿದೆ. ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗದ ಸಾಂವಿಧಾನಿಕ ಮಾನ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೂ ನೀಡಿರುವುದು ಶ್ಲಾಘನಾರ್ಹ. ನ್ಯಾಯಮೂರ್ತಿಗಳಾದ ರೋಹಿಣಿ ಕಮಿಷನ್ ರಚಿಸಿರುವುದು ಮೆಚ್ಚತಕ್ಕ ವಿಚಾರ ಎಂದು ತಿಳಿಸಿದರು.

ಒಬಿಸಿ ಸಮುದಾಯಕ್ಕೆ ಎರಡು ರಾಜ್ಯಪಾಲರ ಹುದ್ದೆಗಳನ್ನೂ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಇಂಥ ಕ್ರಮಗಳಿಂದ ಒಬಿಸಿ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿ ಎಂದು ಅವರು ತಿಳಿಸಿದರು.
ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ರಚಿಸಿರುವುದು, ಯುಪಿಎಸ್‍ಸಿ ಪರೀಕ್ಷೆಯ ಸಂಖ್ಯೆಯನ್ನು ಮೂರರಿಂದ ಆರಕ್ಕೆ ಹೆಚ್ಚಿಸಿರುವುದು, ನವೋದಯ ಶಾಲೆ, ಕೇಂದ್ರೀಯ ಶಾಲೆಯಲ್ಲೂ ಮೀಸಲಾತಿ ಒದಗಿಸಿಕೊಟ್ಟಿರುವುದು ಮಹತ್ವದ ಕಾರ್ಯಗಳು. ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರ ನೇತೃತ್ವದ ಸರಕಾರವು ಸಹಕಾರ ಸೊಸೈಟಿಗಳಲ್ಲಿ ಇಬ್ಬರು ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಿದೆ. ಇದು ಕೂಡ ಮೆಚ್ಚುವ ವಿಚಾರ. ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಬಿಸಿ ಸಮುದಾಯಕ್ಕೆ ಸಂಬಂಧಿಸಿ ಜಾರಿಗೊಳಿಸಿದ ಯೋಜನೆಗಳ ಕುರಿತು ಮಂಡಲ- ತಾಲ್ಲೂಕು- ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಒಬಿಸಿ ಮೋರ್ಚಾ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು. ಅಲೆಮಾರಿ ಸಮಾಜ ಸೇರಿ ಅನೇಕ ಸಮುದಾಯಗಳು ಧ್ವನಿ ಇಲ್ಲದೆ ಇವೆ. ಅವರಿಗೆ ಮಾಹಿತಿ ನೀಡುವ ಕಾರ್ಯವನ್ನು ನಮ್ಮ ಮೋರ್ಚಾ ಮಾಡಲಿದೆ ಎಂದರು.

ಮೋರ್ಚಾವು 60 ಸಾವಿರ ನಿಗದಿತ ಸಸಿ ನೆಡುವ ಗುರಿಯ ಬದಲಾಗಿ ಒಂದು ಲಕ್ಷ ಸಸಿ ನೆಡುವ ಕಾರ್ಯ ಮಾಡುತ್ತಿದೆ. ರಾಜ್ಯದಲ್ಲಿರುವ ಬೆಟ್ಟ ಗುಡ್ಡಗಳಲ್ಲಿ 5 ಲಕ್ಷ ಬೀಜದುಂಡೆ ಬಿತ್ತುವ ಕಾರ್ಯ ನಡೆಯುತ್ತಿದೆ. ಕೋಲಾರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂಥ ಕಾರ್ಯ ನಡೆಯುತ್ತಿದೆ ಪ್ರತಿ ತಿಂಗಳು ಕನಿಷ್ಠ ಎರಡು ಗಂಟೆ ಶ್ರಮದಾನವನ್ನೂ ನಡೆಸಲಾಗುತ್ತಿದೆ ಎಂದು ವಿವರಿಸಿದರು.
“ಹಸಿರು ರಾಯಭಾರಿ” ಎಂದು ಪ್ರತಿ ಮಂಡಲದಲ್ಲಿ ಒಬ್ಬರನ್ನು ಗುರುತಿಸಿ ಅನುಷ್ಠಾನ ಕಾರ್ಯ ನಡೆಸಲಾಗುತ್ತಿದೆ ಎಂದ ಅವರು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಒಬಿಸಿ ಸಮುದಾಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಗುತ್ತಿದೆ. ಇದಕ್ಕಾಗಿ ಪ್ರಧಾನಿಗಳು, ಗೃಹ ಸಚಿವ ಶ್ರೀ ಅಮಿತ್ ಶಾ ಮತ್ತು ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.

ವಿರೋಧ ಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯವನ್ನಷ್ಟೇ ಮಾಡುತ್ತಿವೆ. ಹಳ್ಳಿ ಹಳ್ಳಿಗಳಲ್ಲೂ ಶೌಚಾಲಯ, ಬಡವರ ಮನೆಗಳಿಗೆ ಸಿಲಿಂಡರ್ ಸಂಪರ್ಕ ನೀಡಿರುವುದು ಕೇಂದ್ರದ ಬಿಜೆಪಿ ಸರಕಾರದ ಅತ್ಯುತ್ತಮ ಕಾರ್ಯ ವೈಖರಿಗೆ ಉದಾಹರಣೆ. ಕೋವಿಡ್ ಸಾಂಕ್ರಾಮಿಕವನ್ನು ನಿರ್ವಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿವೆ. ಕೋವಿಡ್ ಲಸಿಕೆ ಕಂಡು ಹಿಡಿಯುವುದೂ ದೊಡ್ಡ ಸಾಧನೆಯೇ ಆಗಿದೆ. ಆದರೆ, ಅದರ ಬಗ್ಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದರು ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ಒ.ಬಿ.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಬಾಬು, ಶ್ರೀ ವಿವೇಕಾನಂದ ಡಬ್ಬಿ, ಒ.ಬಿ.ಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಗೋವಿಂದ ರಾಜು, ರಾಜ್ಯ ಮಾಧ್ಯಮ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here