ಬೆಂಗಳೂರಿನಲ್ಲಿ ಬುಧವಾರ ವಿಕಲಚೇತನರ ಹಕ್ಕುಗಳ ಕಾಯ್ದೆ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್. ಚಿತ್ರ: ವಾರ್ತಾ ಇಲಾಖೆ
ಬೆಂಗಳೂರು: ವಿಕಲಚೇತನರ ಹಕ್ಕುಗಳ ಕಾಯ್ದೆ 2016 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಪ್ರವೇಶಯೋಗ್ಯತೆ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಪಾಲಿಸಲು, ಎಲ್ಲ ಸರ್ಕಾರಿ ಇಲಾಖೆಗಳು ನೇಮಕಾತಿ ಅಧಿಸೂಚನೆ ಹೊರಡಿಸುವ ಮುನ್ನ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.5ರಷ್ಟು ಹುದ್ದೆಗಳನ್ನು ಮೀಸಲಿಟ್ಟಿರುವುದನ್ನು ದೃಢೀಕರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಬುಧವಾರ ಸೂಚಿಸಿದರು.
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಂದುವರಿದ ಭಾಗವಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಪ್ರವೇಶಯೋಗ್ಯತೆ ಕುರಿತು ಉಚ್ಚ ನ್ಯಾಯಾಲಯ 2026ರ ಜೂನ್ 1ರಂದು (W.P. ಸಂಖ್ಯೆ 11351/2020) ನೀಡಿರುವ ಕಾಲಮಿತಿಯ ನಿರ್ದೇಶನಗಳ ಹಿನ್ನೆಲೆಯಲ್ಲಿ ಈ ನಿರ್ಧಾರಗಳನ್ನು ಪ್ರಕಟಿಸಲಾಯಿತು.
ನೇಮಕಾತಿ ಅಧಿಸೂಚನೆಗೂ ಮುನ್ನ ಶೇ.5 ಮೀಸಲಾತಿ ಕುರಿತ ದೃಢೀಕೃತ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳು, ಪಾದಚಾರಿ ಮಾರ್ಗಗಳು, ಉದ್ಯಾನವನಗಳು, ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ವಿಕಲಚೇತನ ಸ್ನೇಹಿಯಾಗಿ ವಿನ್ಯಾಸಗೊಳಿಸಿರುವ ಬಗ್ಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳು ದೃಢೀಕರಣ ನೀಡಬೇಕು ಹಾಗೂ ರಾಜ್ಯಾದ್ಯಂತ ಕಟ್ಟಡಗಳ ಏಕೀಕೃತ ದಾಖಲೆಗಾಗಿ ಈ ಮಾಹಿತಿಯನ್ನು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ನಿರ್ವಹಿಸುವ ಜಿಐಎಸ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ವಸತಿ ಯೋಜನೆಗಳು, ವಸತಿನಿಲಯಗಳು ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ವಿಕಲಚೇತನರಿಗೆ ಪೂರಕ ವ್ಯವಸ್ಥೆ ಕಡ್ಡಾಯವಾಗಿದ್ದು, ನಿಗದಿತ ಮಾನದಂಡ ಪಾಲಿಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಅಥವಾ ಪೂರ್ಣಗೊಳಿಸುವಿಕೆ ಪ್ರಮಾಣಪತ್ರ ನೀಡಬಾರದು ಎಂದು ಸೂಚಿಸಲಾಯಿತು. ಸಾರ್ವಜನಿಕ ಸಾರಿಗೆ ಬಸ್ಸುಗಳು ಮತ್ತು ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು, ಸಿಬ್ಬಂದಿಗೆ ಸಂವೇದನಾಶೀಲತಾ ಶಿಬಿರ ಆಯೋಜಿಸಬೇಕು ಮತ್ತು ವಿಕಲಚೇತನರು ಸುಲಭವಾಗಿ ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು.
ಎಲ್ಲ ಸರ್ಕಾರಿ ವೆಬ್‌ಸೈಟ್‌ಗಳು ಟೆಕ್ಸ್ಟ್ ಟು ವಾಯ್ಸ್ ಮತ್ತು ವಾಯ್ಸ್ ಟು ಟೆಕ್ಸ್ಟ್ ಮಾನದಂಡ ಪಾಲಿಸಬೇಕು ಎಂದು ಇ-ಆಡಳಿತ ಇಲಾಖೆಗೆ ತಿಳಿಸಲಾಯಿತು. ವಿಕಲಚೇತನರಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ‘ಇ-ಕನ್ನಡ’ ಇಂಗ್ಲಿಷ್-ಕನ್ನಡ ನಿಘಂಟನ್ನು ಶೀಘ್ರ ಪೂರ್ಣಗೊಳಿಸಿ ವ್ಯಾಪಕ ಪ್ರಚಾರ ನೀಡಲು ನಿರ್ಧರಿಸಲಾಯಿತು. ಶಾಲಾ ಹಂತದಿಂದಲೇ ಪ್ಯಾರಾ ಕ್ರೀಡೆಗಳಿಗೆ ಉತ್ತೇಜನ ನೀಡಲು ಅರ್ಹ ಮಕ್ಕಳಿಗೆ ಶ್ರವಣ ಸಾಧನ ಒದಗಿಸಿ ಅವರ ಕ್ರೀಡಾ ಪ್ರತಿಭೆ ಗುರುತಿಸಬೇಕು; ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಂಗೀತ ಶಿಕ್ಷಕರ ಹುದ್ದೆಗಳಿಲ್ಲದ ಕಾರಣ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ‘ಪ್ರವೇಶಯೋಗ್ಯತೆ ನೋಡಲ್ ಅಧಿಕಾರಿ’ಗಳನ್ನು ನೇಮಿಸಿ ಅವರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಸಾರ್ವಜನಿಕ ಸ್ಥಳಗಳ ಸೌಲಭ್ಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರಂತರ ಆಡಿಟ್ ನಡೆಸಿ ಸುಧಾರಣಾ ಕ್ರಮ ಕೈಗೊಳ್ಳಲಿದ್ದು, ವಿಕಲಚೇತನರಿಗೆ ಸಂಬಂಧಿಸಿದ ನೀತಿ, ನಿಯಮಗಳ ಕೈಪಿಡಿ ಸಿದ್ಧಪಡಿಸಲು ಸೂಚಿಸಲಾಯಿತು.
ಉಚ್ಚ ನ್ಯಾಯಾಲಯದ ನಿರ್ದೇಶನಗಳ ಅನುಪಾಲನೆ ಕುರಿತ ವಿಷಯವನ್ನು ಪ್ರತಿ ಕೆಡಿಪಿ ಸಭೆಯ ವಿಷಯಸೂಚಿಯಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಎಲ್ಲ ಇಲಾಖೆಗಳು ಕೈಗೊಂಡ ಕ್ರಮಗಳ ಕುರಿತು ‘ಅನುಪಾಲನಾ ವರದಿ’ಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸಭೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.
