ಭಾರತ ನಾವೀನ್ಯತಾ ಸೂಚ್ಯಂಕ-2020 ಪ್ರಕಟ
ಬೆಂಗಳೂರು:
ರಾಜ್ಯವು ಸತತ ಎರಡನೇ ಬಾರಿಗೆ ದೇಶದ ಅಗ್ರಮಾನ್ಯ ನಾವೀನ್ಯತಾ ರಾಜ್ಯ ಎಂಬ ಗರಿಮೆಗೆ ಪಾತ್ರವಾಗಿದೆ. ನೀತಿ ಆಯೋಗ ಪ್ರಕಟಿಸುವ ‘ಭಾರತ ನಾವೀನ್ಯತಾ ಸೂಚ್ಯಂಕ ಪಟ್ಟಿ’ಯಲ್ಲಿ ರಾಜ್ಯವು ಹೋದ ವರ್ಷ ಕೂಡ ಮೊದಲ ಸ್ಥಾನ ಪಡೆದಿತ್ತು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಹೊಸ ಮಾನದಂಡಗಳನ್ನು ಅಳವಡಿಸಲಾಗಿತ್ತು. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಜ್ಯಗಳು ಮಾಡುವ ವೆಚ್ಚ ಹಾಗೂ ಹೊಸ ವ್ಯಾಪಾರೋದ್ಯಮಗಳ ನೋಂದಣಿ ಇವುಗಳಲ್ಲಿ ಪ್ರಮುಖವಾದವು. ರಾಜ್ಯವು ಎಲ್ಲಾ ವಿಭಾಗಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಈ ಸೂಚ್ಯಂಕವು ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ನಾವೀನ್ಯತೆಯನ್ನು ನಿರ್ದೇಶಿಸುವ ವಿವಿಧ ಅಂಶಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ. ಇದು ಸೂಕ್ತ ಕಾರ್ಯನೀತಿಗಳನ್ನು ರೂಪಿಸಲು ಸಹಾಯಕವಾಗಿ ಉದ್ದಿಮೆಗಳಿಗೆ ಹೂಡಿಕೆಯನ್ನು ಆಕರ್ಷಿಸಲು ನೆರವಾಗುತ್ತದೆ ಎಂದರು.
ಈ ಪಟ್ಟಿಯನ್ನು ಅಕ್ಟೋಬರ್ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಗಿತ್ತು. ದೇಶದ ನಾವೀನ್ಯತಾ ಸೂಚ್ಯಂಕವನ್ನು ಜಾಗತಿಕ ನಾವೀನ್ಯತಾ ಸೂಚ್ಯಂಕಕ್ಕೆ ಅನುಗಣವಾಗಿ ಸರಿದೂಗಿಸುವುದು ಇದರ ಉದ್ದೇಶ. ನಾವೀನ್ಯತೆಯು ತಯಾರಿಕಾ ವಲಯದ ಗುಣಮಟ್ಟದ ಉತ್ಪಾದನೆ, ಸ್ಪರ್ಧಾತ್ಮಕತೆ ಹಾಗೂ ರಫ್ತು ಪ್ರವೃತ್ತಿಯನ್ನು ಉತ್ತೇಜಿಸುತ್ತದೆ. ಜೊತೆಗೆ ಆತ್ಮನಿರ್ಭರ ಸ್ಫೂರ್ತಿಯನ್ನು ಎತ್ತಿಹಿಡಿಯುತ್ತದೆ ಎಂದರು.
ಈಗ ಪ್ರಕಟಿಸಲಾಗಿರುವ ಪಟ್ಟಿಯು 36 ಮಾನದಂಡಗಳನ್ನು (ಸೂಚಕಗಳನ್ನು) ಆಧರಿಸಿದೆ. ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ನಾವೀನ್ಯತೆಗೆ ಚಾಲಕ ಬಲ ನೀಡುವ ವಿವಿಧ ಅಂಶಗಳ ವಿಶ್ಲೇಷಣೆಯನ್ನೂ ಇದು ಲಭ್ಯವಾಗಿಸುತ್ತದೆ. ಜಾಗತಿಕವಾಗಿ ನಾವೀನ್ಯತಾ ಸೂಚ್ಯಂಕ ನಿರ್ಧರಿಸಲು 80 ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಅನುಗುಣವಾಗಿ ನೀತಿ ಆಯೋಗ ಕೂಡ ಈ ಪಟ್ಟಿ ನಿರ್ಧರಿಸಲು ವರ್ಷದಿಂದ ವರ್ಷಕ್ಕೆ ಮಾನದಂಡಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಿದೆ ಎಂದು ಹೇಳಿದರು.
ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಕ್ರಮವಾಗಿ ಈ ಸೂಚ್ಯಂಕ ಪಟ್ಟಿಯಲ್ಲಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿರುವ 17 ಪ್ರಮುಖ ರಾಜ್ಯಗಳ ಪೈಕಿ ಹರಿಯಾಣ 6ನೇ ಸ್ಥಾನದಲ್ಲಿದ್ದರೆ, ಬಿಹಾರ ಕಡೆಯ ಸ್ಥಾನದಲ್ಲಿದೆ.
Demonstrating the Government’s continued commitment towards transforming the country into an innovation-driven economy, I joined my colleagues in the launch of the #IndiaInnovationIndex2020. This is a major step in the efficient evaluation of the nation's #innovation ecosystem. pic.twitter.com/t3mQ4sdubS
— Rajiv Kumar 🇮🇳 (@RajivKumar1) January 20, 2021
ಮಾನವ ಸಂಪನ್ಮೂಲ, ಹೂಡಿಕೆ, ವಿಷಯ ತಜ್ಞರು, ಉದ್ಯಮ ಸ್ನೇಹಿ ವಾತಾವರಣ, ಸುರಕ್ಷತೆ, ಉತ್ತಮ ಕಾನೂನು, ಸಾಧನೆ, ಜ್ಞಾನ ಪ್ರಸಾರ ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ವಿವಿಧ ವಲಯಗಳು ಮಾನದಂಡಗಳಾಗಿ ಪರಿಗಣಿತವಾಗುತ್ತವೆ.
ಶೀಘ್ರವೇ ಮಧ್ಯಂತರ ವರದಿ ರಾಜ್ಯದ ವಿವಿಧ ವಲಯಗಳಲ್ಲಿ ನಾವೀನ್ಯತೆಗೆ ಇರುವ ಅವಕಾಶಗಳ ಕುರಿತು ಈಗಾಗಲೇ ಅಧ್ಯಯನ ನಡೆಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಈಗಾಗಲೇ ಸಮಾಚೋಚನೆ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಶೀಘ್ರವೇ ಮಧ್ಯಂತರ ವರದಿ ಪ್ರಕಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ತಿಳಿಸಿದರು.