ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣ ಗೌಡ ವಾರ್ನಿಂಗ್
ಬೀದರ್:
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ನಾರಾಯಣ ಗೌಡ ಅವರು ಇಂದು ಬೀದರ್ ಜಿಲ್ಲೆಯಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು, ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳಿಂದ ಸಚಿವ ನಾರಾಯಣಗೌಡ ಅವರು ಮಾಹಿತಿ ಪಡೆದರು.
ಮೊದಲಿಗೆ ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಜಿಲ್ಲೆಯಲ್ಲಿ 545 ರೇಷ್ಮೆ ಬೆಳೆಗಾರರಿದ್ದು, ಸುಮಾರು 1116 ಎಕರೆಯಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಧಿಕಾರಿಗಳ ಈ ಮಾಹಿತಿಗೆ ಬೇಸರ ವ್ಯಕ್ತಪಡಿಸಿದ ಸಚಿವ ಡಾ.ನಾರಾಯಣಗೌಡ ಅವರು, ಈ ಭಾಗದಲ್ಲಿ ಉತ್ತಮ ನೀರಾವರಿ ಸೌಕರ್ಯ ಇದೆ. ಹಾಗಿದ್ದರೂ 1116 ಎಕರೆಯಲ್ಲಿ ಮಾತ್ರ ರೇಷ್ಮೆ ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಬೆಳೆಯುವುದರಿಂದ ಲಾಭ ಹೆಚ್ಚಿದೆ, ರೈತರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
ಈ ಭಾಗದ ರೈತರು ಶ್ರಮಜೀವಿಗಳು. ಕನಿಷ್ಠ 5 ಸಾವಿರ ಜನ ರೇಷ್ಮೆ ಬೆಳೆಯುವಂತಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕರಪತ್ರಗಳು ಹಂಚುವುದು ಸೇರಿದಂತೆ ಉತ್ತಮ ಪ್ರಚಾರ ನೀಡುವಂತಹ ಕೆಲಸ ಮಾಡಿ. ಜಿಲ್ಲೆಯಲ್ಲಿ ಈಗ ಉತ್ತಮ ಇಳುವರಿ ತೆಗೆಯುತ್ತಿರುವ ರೈತರ ತೋಟಗಳು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕರೆದುಕೊಂಡು ಹೋಗಿ, ಅರಿವು ಮೂಡಿಸಿ ಎಂದು ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉತ್ತಮ ಇಳುವರಿ ತೆಗೆಯುತ್ತಿರುವ ರೇಷ್ಮೆ ಬೆಳೆಗಾರರನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸನ್ಮಾನಿಸುವ ಆಲೋಚನೆ ಇದೆ. ಇದಕ್ಕೆ ಅರ್ಹರನ್ನು ಗುರುತಿಸುವಂತೆ ಅಧಿಕಾರಿಳಿಗೆ ಸೂಚಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.
ರೇಷ್ಮೆ ಇಲಾಖೆ ಬಳಿಕ ಕ್ರೀಡಾ ಇಲಾಖೆ ಕುರಿತು ಪ್ರಗತಿ ಕುರಿತು ಸಚಿವ ನಾರಾಯಣ ಗೌಡ ಅವರು ಪರಿಶೀಲನೆ ನಡೆಸಿದರು.
ಬೀದರ್ ಪಟ್ಟಣದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಸುತ್ತಲು ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಸಚಿವ ನಾರಾಯಣ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು. KRIDL ಗೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. KRIDL ನವರು ಸರಿಯಾಗಿ ಕೆಲಸ ಮಾಡಲ್ಲ. ನಿಮ್ಮನ್ನ ಬ್ಲಾಕ್ ಲೀಸ್ಟ್‌ಗೆ ಸೇರಿಸಲು ಪತ್ರ ಬರೆಯಲಾಗುತ್ತೆ, ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಬೇಜವಾಬ್ದಾರಿ ತೋರುತ್ತಿರುವ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಅವರು ವಾರ್ನಿಂಗ್ ನೀಡಿದರು. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೇ ಟೆಂಡರ್ ರದ್ದು ಮಾಡಿ, ಬೇರೆಯವರಿಗೆ ನೀಡುವುದಾಗಿ ಸಚಿವರು ಗಡುವು ನೀಡಿದರು.
ಇದೇ ವೇಳೆ ಬೀದರ್‌ನಲ್ಲಿ ಪುಟ್ಬಾಲ್ ಆಟಗಾರರು ಹೆಚ್ಚಿದ್ದು, ಒಂದು ಪುಟ್ಬಾಲ್ ಕ್ರೀಡಾಂಗಣ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜೊತೆಗೆ ಜಿಲ್ಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಆಗಬೇಕಿದೆ ಎಂದು ತಿಳಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ನಾರಾಯಣ ಗೌಡ ಅವರು, ಈ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮುಂದಿನ ವರ್ಷದಲ್ಲಿ ಹಲವು ಸಿಬ್ಬಂದಿ ನಿವೃತ್ತಿ ಆಗಲಿದ್ದಾರೆ. ಅದಕ್ಕಾಗಿ ಸಿಬ್ಬಂದಿ ನೇಮಕಾತಿಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಹಣಕಾಸು ಇಲಾಖೆ ಅನುಮತಿ ಪಡೆದು ಶೀಘ್ರದಲ್ಲೇ ಸಿಬ್ಬಂದಿ ನೇಮಕ ಮಾಡಲಾಗುವುದು.
— Dr.Narayana Gowda / ಡಾ.ನಾರಾಯಣ ಗೌಡ (@narayanagowdakc) October 25, 2021
2/2
ಭಾಲ್ಕಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಇಲ್ಲ. ಅಗತ್ಯ ಜಾಗವನ್ನು ಗುರುತಿಸಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಹೊಸದಾಗಿ ಮೂರು ತಾಲೂಕುಗಳು ರಚನೆಯಾಗಿದ್ದು, ಅಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕನಿಷ್ಠ 5 ಎಕರೆ ಭೂಮಿಯ ಅಗತ್ಯ ಇದೆ. ಅದನ್ನು ಒದಗಿಸುವಂತೆ ಸಚಿವ ಡಾ. ನಾರಾಯಣಗೌಡ ಅವರು ತಿಳಿಸಿದರು.
ಹಳ್ಳಿಹಳ್ಳಿಯಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಅನ್ನೋದು ನನ್ನ ಕನಸು. ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದರೇ ಬೇರೆ ರೀತಿಯ ಚಟುವಟಿಕೆಗಳು ಕಡಿಮೆ ಆಗಲಿವೆ. ಹಾಗಾಗಿ ಕ್ರೀಡೆಗೆ ಶಕ್ತಿ ತುಂಬುವಂತಹ ಕೆಲಸ ಆಗಬೇಕು ಅನ್ನೋ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಕ್ರೀಡಾ ಇಲಾಖೆಗೆ ಎಲ್ಲಾ ರೀತಿಯ ನೆರವು ಹಾಗೂ ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವ ನಾರಾಯಣಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮುಂದಿನ ವರ್ಷದಲ್ಲಿ ಹಲವು ಸಿಬ್ಬಂದಿ ನಿವೃತ್ತಿ ಆಗಲಿದ್ದಾರೆ. ಅದಕ್ಕಾಗಿ ಸಿಬ್ಬಂದಿ ನೇಮಕಾತಿಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಹಣಕಾಸು ಇಲಾಖೆ ಅನುಮತಿ ಪಡೆದು ಶೀಘ್ರದಲ್ಲೇ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಎಸ್‌ಎಂಡಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ರಾಮಚಂದ್ರನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.