ಬೆಂಗಳೂರು:
ರಾಜ್ಯದ 10ನೇ ತರಗತಿ ವಿದ್ಯಾರ್ಥಿಗಳ ಹಾಗೂ ಪೋಷಕರ ಬಹುದಿನಗಳ ನಿರೀಕ್ಷೆಯಾಗಿದ್ದ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ. ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಲಾಗಿದ್ದು, ಜುಲೈ 19 ಮತ್ತು 22ರಂದು ಎರಡು ದಿನಗಳ ಕಾಲ ಈ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಪರೀಕ್ಷೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್‍ಪಿ, ಡಿಎಚ್‍ಒ, ಖಜಾನಾಧಿಕಾರಿಗಳು ಹಾಗೂ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಮಾರ್ಗದರ್ಶನ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿ, ಪರೀಕ್ಷೆ ಕುರಿತು ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು.
ಜುಲೈ 19ರಂದು ಕೋರ್ ವಿಷಯಗಳಿಗೆ ಮತ್ತು 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭಗೊಳ್ಳಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನಿರ್ದೇಶಿಸಿರುವ ಎಸ್‍ಒಪಿ ಪರಿಗಣಿಸಿ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಈ ಕುರಿತಂತೆ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾರ್ಗದರ್ಶನ ನೀಡಲಾಗಿದೆ. ಹಾಗೆಯೇ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಭಾಗವಹಿಸಿ ತಮ್ಮ ಇಲಾಖೆಯಿಂದ ಕೈಗೊಳ್ಳಬಹುದಾದ ಕ್ರಮಗಳನ್ನು ವಿವರಿಸಿದರು. ವಿಶೇಷವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಯೋಜಿತರಾಗುವ ಎಲ್ಲ ಸಿಬ್ಬಂದಿಗೆ ತಕ್ಷಣವೇ ಕೋವಿಡ್ ಲಸಿಕೆ ಒದಗಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಪರೀಕ್ಷಾ ಕೇಂದ್ರಗಳು – ಸುರಕ್ಷಾ ಕೇಂದ್ರಗಳು:
ಪರೀಕ್ಷಾ ಕೇಂದ್ರಗಳು ಸುರಕ್ಷಾ ಕೇಂದ್ರಗಳಾಗಿರಲಿವೆ. ಪ್ರತಿದಿನವೂ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಸೋಂಕು ನಿವಾರಕ ದ್ರಾವಣದಿಂದ ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನಿಂದ ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜೇಷನ್ ಮಾಡುವುದು, ಪರೀಕ್ಷಾ ಕೇಂದ್ರಕ್ಕೆ ಆಗಮನ ಮತ್ತು ನಿರ್ಗಮನ ಹಾಗೆಯೇ ಕೊಠಡಿ ಪ್ರವೇಶ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಪರೀಕ್ಷಾ ಕೇಂದ್ರದ ಪ್ರವೇಶದ ಸಂದರ್ಭದಲ್ಲಿ ಮಕ್ಕಳ ಕೈಗೆ ಸ್ಯಾನಿಟೈಜ್ ಮಾಡುವುದು. ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿರಬೇಕು. ಒಂದು ಡೆಸ್ಕ್‌ಗೆ ಒಬ್ಬ ಪರೀಕ್ಷಾರ್ಥಿ ಮಾತ್ರವೇ ಇರಬೇಕು. ಮಕ್ಕಳು ಯಾವ ಸಮಯದಲ್ಲೂ ಗುಂಪು ಗೂಡುವುದನ್ನು ತಡೆಯುವುದು. ಮನೆಯಿಂದ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ತರುವುದಕ್ಕೆ ಅವಕಾಶ ಕಲ್ಪಿಸುವುದು. ಪರೀಕ್ಷಾ ಕೊಠಡಿಯಲ್ಲಿ ಮಳೆ ನೀರು ಇರುಚಲು ಸಿಂಪಡಿಸದಂತೆ ಕ್ರಮ ವಹಿಸುವುದು. ಗಾಮೀಣ ವಿಭಾಗದ ಅಭ್ಯರ್ಥಿಗಳು ಸಾಧ್ಯವಾದಷ್ಟು ತಾಲೂಕು ಕೇಂದ್ರಗಳಿಗೆ ಹೋಗದಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಎಸ್.ಓ.ಪಿ ಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
correction:
— Thebengalurulive/ಬೆಂಗಳೂರು ಲೈವ್ (@bengalurulive_) June 28, 2021
Karnataka to conduct SSLC examination on July 19 and July 22
ವಿಶೇಷ ಕೊಠಡಿ:
ಕೆಮ್ಮು, ನೆಗಡಿ, ಜ್ವರ ಮೊದಲಾದುವುಗಳಿಂದ ಬಳಲುತ್ತಿರುವ ಇಲ್ಲವೇ ಈ ಲಕ್ಷಣಗಳಿರುವ ಅಭ್ಯಥಿಗಳಿಗಾಗಿ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಬೇಕೆಂದೂ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್ ಪ್ರವೇಶಿಸುವಂತೆ ನಿರ್ದೇಶಿಸುವುದು. ಆರೋಗ್ಯ ಕೌಂಟರ್‌ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಲಿವೆ. ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರುವುದನ್ನು ಖಾತರಿಪಡಿಸಬೇಕೆಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್‌ಗಳಲ್ಲೇ ಮಾಸ್ಕ್ ನೀಡಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ತುರ್ತು ಚಿಕಿತ್ಸಾ ವಾಹನ:
ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡುವುದು. ಪರೀಕ್ಷಾ ಸಿಬ್ಬಂದಿಯೂ ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್ ಶೀಲ್ಡ್ ಬಳಸುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ವಹಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಸ್ಥಾಪನೆ:
ಪರೀಕ್ಷಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಕಂಡು ಬಂದಿದ್ದರೆ ಅಂತಹ ಪರೀಕ್ಷಾರ್ಥಿಗೆ ತಾಲೂಕಿಗೊಂದು ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಯೇ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಸೋಂಕು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್‌ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡುಬಂದರೆ ಸಮೀಪದ ವಿದ್ಯಾರ್ಥಿ ಕೋವಿಡ್ ಕೇರ್ ಸೆಂಟರ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಕೋವಿಡ್ ಆರೈಕೆ ಕೇಂದ್ರದಲ್ಲಿ ಒಂದು ಅಂಬುಲೆನ್ಸ್ ವಾಹನ ಕಾಯ್ದಿರಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ರವಾನೆ, ಪರೀಕ್ಷೆ ನಂತರ ಒ.ಎಂ.ಆರ್. ಶೀಟ ಗಳ ರವಾನೆ ಕುರಿತು ನಿಗದಿತ ಸೂಚನೆಗಳನ್ನು ಒದಗಿಸಲಾಗಿದ್ದು, ಹಾಗೂ ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆ ಯಶಸ್ಸಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಪರೀಕ್ಷಾ ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಸೆಂಟರ್‌ಗಳನ್ನು ಮುಚ್ಚಿಸುವುದು, ಸೆಕ್ಷನ್-144 ಜಾರಿಗೊಳಿಸುವುದು, ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ ಸಮಯದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವುದು, ಪರೀಕ್ಷಾ ಕೇಂದ್ರದ ಬಳಿ ಸಂಚಾರ ಒತ್ತಡವಾದಂತೆ ಕ್ರಮ ವಹಿಸುವುದೂ ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಸುರೇಶ್ ಕುಮಾರ್ ವಿವರಿಸಿದರು.
8,76,581 ವಿದ್ಯಾರ್ಥಿಗಳ ನೊಂದಣಿ:
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಒಟ್ಟುಸಂಖ್ಯೆ 8,76,581. ಅದರಲ್ಲಿ 4,72,643 ವಿದ್ಯಾಥಿಗಳು ಮತ್ತು 403938 ವಿದ್ಯಾರ್ಥಿನಿಯರಿದ್ದಾರೆ. ಅದರಲ್ಲಿ 783955 ಹೊಸ ಅಭ್ಯರ್ಥಿಗಳು, 0977-ಪುನರಾವರ್ತಿತ ವಿದ್ಯಾರ್ಥಿಗಳು, 21817-ಖಾಸಗಿ ವಿದ್ಯಾರ್ಥಿಗಳು, 9419-ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು, ಹೊಸ ಸ್ಕೀಂ ವಿದ್ಯಾರ್ಥಿಗಳು- 392, ಹೊಸ ಸ್ಕೀಂ ಪುನರಾವರ್ತಿತ ವಿದ್ಯಾರ್ಥಿಗಳು-21 ಸೇರಿದ್ದಾರೆ.
ಪರೀಕ್ಷೆಗೆ ನೋಂದಾಯಿಸಿರುವ ಒಟ್ಟು ಶಾಲೆಗಳ ಸಂಖ್ಯೆ-14,927, ಅದರಲ್ಲಿ, ಸಕಾರಿ–5289, ಅನುದಾನಿತ – 3392, ಅನುದಾನರಹಿತ–6246 ಶಾಲೆಗಳು ನೊಂದಾಯಿಸಿಕೊಂಡಿವೆ. ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಸಂಖ್ಯೆ -876581, ಸರ್ಕಾರಿ –351303, ಅನುದಾನಿತ – 235908, ಅನುದಾನರಹಿತ–289370 ಅಭ್ಯರ್ಥಿಗಳಿದ್ದಾರೆ.
ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ- 4884, ಸಕಾರಿ–1831, ಅನುದಾನಿತ- 1294, ಅನುದಾನರಹಿತ–1759 ಶಾಲೆಗಳ ಪರೀಕ್ಷಾ ಕೇಂದ್ರಗಳಿವೆ. ಸಾಮಾನ್ಯ ಪರೀಕ್ಷಾ ಕೇಂದ್ರಗಳು –4708, ಖಾಸಗಿ ಪರೀಕ್ಷಾ ಕೇಂದ್ರಗಳು – 176, ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು –2166, ನಾನ್‍ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು –2542 ಇವೆ ಎಂದು ಸುರೇಶ್ ಕುಮಾರ್ ವಿವರಿಸಿದರು.
73066 ಪರೀಕ್ಷಾ ಕೊಠಡಿಗಳು:
ಒಟ್ಟು ಪರೀಕ್ಷಾ ಕೊಠಡಿಗಳು –73066, ಮುಖ್ಯಅಧೀಕ್ಷಕರು–4884, ಪ್ರಶ್ನೆಪತ್ರಿಕೆ ಅಭಿರಕ್ಷಕರು–4884, ಕೊಠಡಿ ಮೇಲ್ವಿಚಾರಕರು–80389, ಸ್ಥಾನಿಕ ಜಾಗೃತ ದಳದವರು –4884, ಮೊಬೈಲ್ ಸ್ವಾಧೀನಾಧಿಕಾರಿಗಳು –4884, ದೈಹಿಕ ಶಿಕ್ಷಣ ಶಿಕ್ಷಕರು / ಇತರೆ ಶಿಕ್ಷಕರು–4884, ಆಶಾ ಕಾಯಕತೆಯರು–9768, ಆರಕ್ಷಕರು–4884 ಮಂದಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವರು ವಿವರಿಸಿದರು.
ಅಂತಿಮ ಪ್ರವೇಶ ಪತ್ರವನ್ನು ಸಿದ್ದಪಡಿಸಲಾಗಿದ್ದು, ಮಂಡಳಿಯ ಜಾಲತಾಣದ ಮುಖಾಂತರ ಶಾಲಾ ಲಾಗಿನ್‍ಗೆ ಜೂ. 29ರಂದು ಅಪ್‍ಲೋಡ್ ಮಾಡಲಾಗುವುದು. ಒಟ್ಟು 14,927 ಶಾಲೆಗಳಿಂದ ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮುಖಾಂತರ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದು ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಥರ್ಮಲ್ ಸ್ಕ್ಯಾನರ್:
ಜೂನ್/ಜುಲೈ 2020ರ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಮಂಡಳಿಯಿಂದ ನೀಡಲಾಗಿದ್ದ “ಥಮಲ್ ಸ್ಕ್ಯಾನರ್”ಗಳನ್ನೇ ಈ ಪರೀಕ್ಷೆಗೂ ಉಪಯೋಗಿಸಿಕೊಳ್ಳಲಾಗುವುದು ಹಾಗೂ ಇದರಜೊತೆಗೆ ಈಗಾಗಲೇ ಎಂಬೆಸ್ಸಿ ಗ್ರೂಪ್ ಸಂಸ್ಥೆಯವರು ಸಕಾರಿ ಪ್ರೌಢ ಶಾಲೆಗಳಿಗೆ 5,000 “ಥರ್ಮಲ್ ಸ್ಕ್ಯಾನರ್” ಗಳನ್ನು ನೀಡಿದ್ದು, ಇವುಗಳನ್ನು ಸಹ ಸಂಬಂಧಿಸಿದ ಉಪ ನಿರ್ದೇಶಕರು ತಮ್ಮ ಸುಪದಿಗೆ ಪಡೆದು ಪರೀಕ್ಷಾ ಕೇಂದ್ರಗಳಲ್ಲಿ ಉಪಯೋಗಿಸಿಕೊಳ್ಳಲಾಗುವುದು. ಇದಾದ ಬಳಿಕವೂ ಕೊರತೆ ಉಂಟಾದಲ್ಲಿ ಆರೋಗ್ಯ ಇಲಾಖೆಯವರಿಂದ ಪಡೆದು ಉಪಯೋಗಿಸಿಕೊಳ್ಳಲಾಗುವುದು.
ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರ ಸುರಕ್ಷತಾದೃಷ್ಟಿಯಿಂದಒಟ್ಟು 4884 ಪರೀಕ್ಷಾ ಕೇಂದ್ರಗಳಿಗೂ ಎಂಬೆಸ್ಸಿ ಗ್ರೂಪ್ ಸಂಸ್ಥೆಯವರು ಉಚಿತವಾಗಿ ಸ್ಯಾನಿಟೈಸರ್‍ಗಳನ್ನು ಒದಗಿಸಲಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತಾ ಹಿತದೃಷ್ಠಿಯಿಂದ ಬಟ್ಟೆಯಿಂದ ತಯಾರಿಸಲಾದ ಇಲ್ಲವೇ ಸರ್ಜಿಕಲ್ ಮಾಸ್ಕ್ ಗಳನ್ನು ಬಳಸಬೇಕಾಗಿರುತ್ತದೆ. ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸುಮಾರು 1.30 ಲಕ್ಷ ಅಧಿಕಾರಿಗಳು/ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಮತ್ತುರೋಗ ಲಕ್ಷಣಗಳು ಕಂಡುಬರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎನ್.95 ಫೇಸ್ ಮಾಸ್ಕ್‍ಗಳನ್ನು ಭಾರತ್ ಸ್ಕೌಟ್&ಗೈಡ್ಸ್ ಸಂಸ್ಥೆಯು ಉಚಿತವಾಗಿ ಒದಗಿಸಲಿದೆ ಎಂದು ಹೇಳಿದ ಸಚಿವ ಸುರೇಶ್ ಕುಮಾರ್ ಈ ಎರಡೂ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರಿಗೆ ಆ ಸಂದರ್ಭಕ್ಕೆ ಅನುಗುಣವಾಗಿ ಕೋವಿಡ್-19ರ ಆರ್.ಎ.ಟಿ. ಇಲ್ಲವೇ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡುವ ಕುರಿತು ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕ್ರಮ ವಹಿಸಲಿದ್ದಾರೆಂದು ಸಚಿವರು ಹೇಳಿದರು.