ಬೆಂಗಳೂರು:
ರಾಜ್ಯದಲ್ಲಿ ವಾಹನ ಚಾಲಕರ ನಿಗಮ ಸ್ಥಾಪನೆ ಮತ್ತು ಸಿ.ಎನ್.ಜಿ ಕಿಟ್ ಪರಿವರ್ತನೆಗೆ ಆಟೋ ಚಾಲಕರಿಗೆ ಸಬ್ಸಿಡಿ ನೀಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘವು ಮಲ್ಲೇಶ್ವರಂನಲ್ಲಿ ವಾಜಪೇಯಿ ಅವರ ಹುಟ್ಟು ಹಬ್ಬದ ಅಂಗವಾಗಿ ಹಿರಿಯ ಚಾಲಕರಿಗೆ ಸನ್ಮಾನ, ಸಮವಸ್ತ್ರ ವಿತರಣೆ, ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.
ದೇಶದಲ್ಲಿ ಸದ್ಯದಲ್ಲೇ ವಿದ್ಯುತ್ ಚಾಲಿತ ಮತ್ತು ಎಥೆಲಾನ್ ಮುಂತಾದ ಜೈವಿಕ ಇಂಧನಗಳಿಂದ ಓಡುವ ಆಟೋ ಮತ್ತಿತರ ವಾಹನಗಳು ಜನಪ್ರಿಯಗೊಳ್ಳಲಿವೆ. ವಿದ್ಯುತ್ ಚಾಲಿತ ಆಟೋಗಳ ಉತ್ಪಾದನೆಗೆ ಹತ್ತಾರು ಕಂಪನಿಗಳು ಆಸಕ್ತಿ ತೋರಿದ್ದು, ಮುಂಬರುವ ದಿನಗಳಲ್ಲಿ ಇ.ವಿ. ವಾಹನಗಳ ಬೆಲೆ ಗಣನೀಯವಾಗಿ ಇಳಿಯಲಿದೆ. ಆಟೋ ಚಾಲಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಸಂಘಟಿತ ವಲಯದ ಕೆಲಸಗಾರರಿಗೆ ಸಾಕಷ್ಟು ಅನುಕೂಲಗಳನ್ನು ಒದಗಿಸುತ್ತಿವೆ. ಹಾಗೆಯೇ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಗೃಹ ನಿರ್ಮಾಣ ಯೋಜನೆಯಡಿ 1 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆಟೋ ಚಾಲಕರು ಇದಕ್ಕೆ ಅರ್ಜಿ ಹಾಕಿಕೊಂಡರೆ, ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ನುಡಿದರು.
ವಾಹನ ಕ್ಷೇತ್ರದಲ್ಲಿ ಪೆಟ್ರೋಲ್- ಡೀಸೆಲ್ ಗಳಿಗೆ ಪರ್ಯಾಯವಾಗಿ ಎಥೆನಾಲ್, ಗ್ರೀನ್ ಹೈಡ್ರೋಜನ್ ಮುಂತಾದ ಜೈವಿಕ ಇಂಧನಗಳನ್ನು ಉತ್ತೇಜಿಸಲಾಗುತ್ತಿದೆ. ಇದರ ನಿಮಿತ್ತವಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಜ.10ರಂದು ಬೆಂಗಳೂರಿನಲ್ಲಿರುವ ಪರಿಸರಸ್ನೇಹಿ ಜಲಜನಕ ಉತ್ಪಾದನಾ ಘಟಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಆಟೋ ಚಾಲಕರು ಡಿಜಿಟಲ್ ಖಾತೆ ತೆರೆಯುವುದಕ್ಕೆ ಮತ್ತು ತೆರಿಗೆ ರಿಟರ್ನ್ಸ್ ಸಲ್ಲಿಸಲು ಆದ್ಯತೆ ಕೊಡಬೇಕು. ಇದರಿಂದ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ, ಅಗತ್ಯ ಸಂದರ್ಭಗಳಲ್ಲಿ ವಿಮೆ ಮುಂತಾದವು ಸುಲಭವಾಗಿ ಸಿಗುತ್ತವೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಲಯನ್ ಮಂಜುನಾಥ್, ಉದ್ಯಮಿ ಯಮುನಾ ಶಾಸ್ತ್ರಿ, ಸ್ಥಳೀಯ ಮುಖಂಡರಾದ ಗೋಪಾಲಕೃಷ್ಣ, ಸಂಪತ್, ರವಿಕುಮಾರ್, ಹೇಮಲತಾ ಸತೀಶ್, ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಸ್ಪ್ಯಾರ್ ಬ್ಯಾಂಕ್ ಯಮುನಾ ಶಾಸ್ತ್ರಿಗೆ ಮೆಚ್ಚುಗೆ
75 ಸಾವಿರ ಆಟೋ ಚಾಲಕರು ಬ್ಯಾಂಕ್ ಖಾತೆ ತೆರೆಯಲು ನೆರವು ನೀಡಿರುವ ಮತ್ತು ಟಿಡಿಎಸ್ ನಲ್ಲಿ ಸರಕಾರಕ್ಕೆ ಹೋಗಿದ್ದ 22 ಕೋಟಿ ರೂ.ಗಳಿಗೂ ಹೆಚ್ಚು ಹಣವು ಪುನಃ ಆಟೋ ಚಾಲಕರ ಕೈಗೆ ಸಿಗುವಂತೆ ಮಾಡಿರುವ ಉದ್ಯಮಿ ಯಮುನಾ ಶಾಸ್ತ್ರಿ ಅವರನ್ನು ಸಚಿವರು ಈ ಸಂದರ್ಭದಲ್ಲಿ ಪ್ರಶಂಸಿಸಿದರು.