Home ಬೆಳಗಾವಿ ಅನುದಾನಿತ ಶಾಲೆ-ಕಾಲೇಜುಗಳ 257 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ

ಅನುದಾನಿತ ಶಾಲೆ-ಕಾಲೇಜುಗಳ 257 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ

80
0

ಬೆಳಗಾವಿ ಸುವರ್ಣಸೌಧ:

ರಾಜ್ಯದ ಅನುದಾನಿತ ಪ್ರೌಢ,ಪದವಿ ಪೂರ್ವ ಕಾಲೇಜುಗಳಲ್ಲಿ ನಿಧನ ಹಾಗೂ ನಿವೃತ್ತಿಯಿಂದ 2015 ಡಿಸೆಂಬರ್ ಅಂತ್ಯದವರೆಗೆ ತೆರವಾಗಿರುವ ಹುದ್ದೆಗಳಲ್ಲಿ 257 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ ಮತ್ತು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಸಮಸ್ಯೆ ಉದ್ಭವಿಸಿದ್ದು,ಅದನ್ನು ಬಗೆಹರಿಸಲಾಗುವುದು. ಸದಸ್ಯರ ಬೇಡಿಕೆಯ ಅನುಸಾರ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿಗೆ ಸಂಬಂಧಿಸಿದಂತೆ ಶೀಘ್ರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಶಶೀಲ್ ನಮೋಶಿ, ಕೆ.ಟಿ.ಶ್ರೀಕಂಠೇಗೌಡ, ಎಸ್.ವಿ.ಸಂಕನೂರು, ಪುಟ್ಟಣ, ಅರುಣ ಶಹಾಪುರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.

ಮೊದಲು ಈಗ ಅನುಮತಿ ನೀಡಲಾಗಿರುವ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಿಕೊಳ್ಳಿ;ಉಳಿದವುಗಳಿಗೆ ನಂತರ ಅನುಮತಿ ನೀಡುವುದಕ್ಕೆ ಆರ್ಥಿಕ ಇಲಾಖೆ ಸಮ್ಮತಿ ಪಡೆದು ಕ್ರಮವಹಿಸಲಾಗುವುದು ಎಂದರು.

2015 ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಅನುದಾನಿತ ಪ್ರೌಢ,ಪದವಿ ಪೂರ್ವ ಕಾಲೇಜುಗಳಲ್ಲಿ 2081 ಹುದ್ದೆಗಳು ತೆರವಾಗಿದ್ದು, ಅವುಗಳಲ್ಲಿ ಸರಕಾರ 257 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ;ಕೋವಿಡ್ ನೆಪ ಹಾಗೂ ಆರ್ಥಿಕ ಮಿತವ್ಯಯದ ನೆಪದಲ್ಲಿ ತಡೆಹಿಡಿಯಲಾಗಿರುವುದು ಸರಿಯಲ್ಲ. ಅವುಗಳ ಜೊತೆಗೆ 2015ರವರೆಗೆ ಖಾಲಿ ಇರುವ 2081 ಹುದ್ದೆಗಳು ಮತ್ತು 2021ರವರೆಗೆ ಖಾಲಿಯಾಗಿರುವ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದೇ ಗುರುವಾರದೊಳಗೆ ಶಿಕ್ಷಣ,ಉನ್ನತ ಶಿಕ್ಷಣ ಸಚಿವರು,ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದಿಂದ ಚುನಾಯಿತರಾದ ಸದಸ್ಯರು,ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸಭೆ ನಡೆಸಿ ತೀರ್ಮಾನಕ್ಕೆ ಬನ್ನಿ;ನಂತರ ಸದನಲ್ಲಿ ಈ ಕುರಿತು ಮುಕ್ತವಾಗಿ ಚರ್ಚಿಸೋಣ ಎಂದು ಹೇಳಿ ಈ ವಿಷಯಕ್ಕೆ ವಿರಾಮ ಎಳೆದರು.

LEAVE A REPLY

Please enter your comment!
Please enter your name here