ಅಕ್ಕಿ ಲಭ್ಯವಾಗುವವರೆಗೂ 5 ಕೆಜಿ ಅಕ್ಕಿಯ ಮೊತ್ತವನ್ನು ಡಿಬಿಟಿ ಮೂಲಕ ನೀಡಲು ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು:
ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರಧಾನ್ಯವನ್ನು ಜುಲೈ1 ರಿಂದ ನೀಡಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ.170 ನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರೆಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಬಡವರಿಗೆ ಅಕ್ಕಿ ಕೊಡುವ ವಿಷಯದಲ್ಲಿ ರಾಜ್ಯದಲ್ಲಿರುವ ಬಿಜೆಪಿಯವರು ಕೇಂದ್ರದೊಂದಿಗೆ ಮಾತನಾಡಿ ಅಕ್ಕಿ ಕೊಡಿಸಬೇಕಿತ್ತು. ನಾನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಹಾಗೂ ರಾಜ್ಯ ಆಹಾರ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಕ್ಕಿ ಸರಬರಾಜು ಮಾಡಲು ಮನವಿ ಮಾಡಲಾಯಿತು. ಎನ್ ಸಿ ಸಿಎಫ್, ನಫೆಡ್, ಕೇಂದ್ರೀಯ ಭಂಡಾರ,ಈ ಮೂರು ಸಂಸ್ಥೆಗಳು ಅಕ್ಕಿ ಪೂರೈಸಲು ಸೂಚಿಸಿರುವ ದರ ಹೆಚ್ಚಾಗಿದೆ. ಎನ್ ಸಿ ಸಿ ಎಫ್ ನವರು 32.94 ಪೈಸೆ ಸೂಚಿಸಿದ್ದು, ನಾವು 32.24 ರೂ.ಗಳಿಗೆ ನೀಡಬೇಕೆಂದು ಕೋರಿದ್ದೇವೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಜುಲೈ 1 ರಿಂದ ಅಕ್ಕಿ ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ. ರಾಜ್ಯಕ್ಕೆ ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಇಷ್ಟು ಪ್ರಮಾಣದ ಅಕ್ಕಿಯನ್ನು ಯಾವ ರಾಜ್ಯದವರೂ ಪೂರೈಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ರಚಿಸಿದ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಹಿಂದೆ ನಮ್ಮ ಸರ್ಕಾರ ಜನರಿಗೆ 7 ಕೆಜಿವರೆಗೆ ಅಕ್ಕಿ ಪೂರೈಸಲಾಗುತ್ತಿತ್ತು. ಈಗ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಲ್ಲಿಯೂ ಅಕ್ಕಿಯ ದರ ಹೆಚ್ಚಾಗಿದೆ ಎಂದರು.
ಬಿಜೆಪಿ ಸವಾಲನ್ನು ಸರಿಗಟ್ಟಿದ ಸಿಎಂ
ರಾಜ್ಯ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಕ್ಕಿ ಕೊಡಲು ಶ್ರಮಿಸುತ್ತಿದ್ದಾಗ ಬಿಜೆಪಿಯು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಆಡಿಕೊಂಡಿತ್ತು. ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಅಕ್ಕಿ ಮೊತ್ತದ ಹಣ ಕೊಡಿ ಎನ್ನುವ ಸವಾಲನ್ನು ಸರ್ಕಾರದ ಮುಂದೆ ಇಟ್ಟಿತ್ತು. ಈ ಸವಾಲನ್ನು ಸರಿಗಟ್ಟಿದ ಸರ್ಕಾರ ಅಕ್ಕಿ ಬದಲಿಗೆ ಅಕ್ಕಿ ಮೊತ್ತದ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಾಕುವ ನಿರ್ಧಾರ ತೆಗೆದುಕೊಂಡು ಬಿಜೆಪಿಯ ಬತ್ತಳಿಕೆಯನ್ನು ಬರಿದು ಮಾಡಿದೆ.