ತಿರುಪತಿಯ ಮೊದಲ ಆರತಿಯಲ್ಲಿ ಕರ್ನಾಟಕದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅವಕಾಶ; ಹೊಸ ಪ್ರೋಟೋಕಾಲ್ ಆದೇಶ ಹೊರಡಿಸಲು ಸರ್ಕಾರ ನಿರ್ಧಾರ: ಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 12: ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯುವ ಮೊದಲ ಆರತಿಯಲ್ಲಿ ಕರ್ನಾಟಕದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಲು ಅವಕಾಶ ಕಲ್ಪಿಸುವ ಹೊಸ ಪ್ರೋಟೋಕಾಲ್ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಘೋಷಿಸಿದರು.
ಬೆಂಗಳೂರಿನ ಬನಶಂಕರಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ತಿರುಪತಿಯಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿ ಕರ್ನಾಟಕಕ್ಕೆ ಸಂಬಂಧಿಸಿದ ವಿಶೇಷ ಗೌರವವಾಗಿದ್ದು, ಇದನ್ನು ರಾಜ್ಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
“ತಿರುಪತಿಯಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿ ಕರ್ನಾಟಕಕ್ಕೆ ಸೇರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಇತರ ಗಣ್ಯರು ಮೊದಲ ಆರತಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರದಿಂದ ಪ್ರೋಟೋಕಾಲ್ ಆದೇಶ ಹೊರಡಿಸಲಾಗುವುದು” ಎಂದು ಮುಖ್ಯಮಂತ್ರಿ ಹೇಳಿದರು.
ಮುಖ್ಯಮಂತ್ರಿಗೆ ಮಾತ್ರ ಸೀಮಿತವಾಗಿದ್ದ ಅವಕಾಶ
ಈವರೆಗೆ ಈ ಅವಕಾಶ ಮುಖ್ಯಮಂತ್ರಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿದಿನ ಕರ್ನಾಟಕ ಸರ್ಕಾರದ ವಿಶೇಷಾಧಿಕಾರಿಯೊಬ್ಬರು ತಿರುಪತಿಯಲ್ಲಿ ಮೊದಲ ಆರತಿಗೆ ಹಾಜರಾಗುತ್ತಿದ್ದರು ಎಂದು ಅವರು ತಿಳಿಸಿದರು.
“ಇನ್ನು ಮುಂದೆ ಸಚಿವರು, ಶಾಸಕರು, ಹಿರಿಯ ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಸರ್ಕಾರವನ್ನು ಪ್ರತಿನಿಧಿಸುವ ಯಾವುದೇ ಗಣ್ಯರು ತಿರುಪತಿಗೆ ಭೇಟಿ ನೀಡಿದರೆ ಮೊದಲ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಸಂಬಂಧ ಅಗತ್ಯ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.
ಜನಪ್ರತಿನಿಧಿಗಳಿಗೆ ದರ್ಶನದ ಅವಕಾಶ
“ಬಹಳಷ್ಟು ಶಾಸಕರು ಮತ್ತು ಜನಪ್ರತಿನಿಧಿಗಳು ತಿರುಪತಿಗೆ ತೆರಳಿ ಸಮರ್ಪಕ ದರ್ಶನವಿಲ್ಲದೆ ಹಿಂದಿರುಗಿರುವ ಉದಾಹರಣೆಗಳಿವೆ. ಇನ್ನು ಮುಂದೆ ಅವರಿಗೆ ದೇವರ ಸನ್ನಿಧಿಯಲ್ಲಿ ನಿಂತು ಮೊದಲ ಆರತಿ ಸ್ವೀಕರಿಸುವ ಅವಕಾಶ ದೊರೆಯಲಿದೆ. ರಾಜ್ಯದ ಸೇವೆ ಮಾಡುತ್ತಿರುವವರಿಗೆ ದೇವರ ಆಶೀರ್ವಾದ ಪಡೆಯುವ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ. ನನ್ನ ಅವಧಿಯಲ್ಲಿ ಕೈಗೊಳ್ಳಲಿರುವ ಪ್ರಮುಖ ನಿರ್ಧಾರಗಳಲ್ಲಿ ಇದೂ ಒಂದಾಗಿದೆ” ಎಂದು ಹೇಳಿದರು.
ತಿರುಪತಿಯಲ್ಲಿನ ಕರ್ನಾಟಕ ಟ್ರಸ್ಟ್ ನೆನಪಿಸಿಕೊಂಡ ಸಿಎಂ
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ಸ್ಥಾಪಿಸಿ, ಭವ್ಯ ಕಟ್ಟಡ ನಿರ್ಮಿಸುವ ಉದ್ದೇಶದಿಂದ ತಮ್ಮನ್ನು ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಿಸಿದ್ದರು ಎಂದು ಶಿವಕುಮಾರ್ ನೆನಪಿಸಿಕೊಂಡರು.
“ಆದರೆ ನಮ್ಮ ಸರ್ಕಾರದ ಅವಧಿ ಮುಗಿದ ಕಾರಣ ಆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ನಾನು ಅಧ್ಯಕ್ಷನಾಗಿ ಮುಂದುವರಿಯಲಿಲ್ಲ. ಮಹಾರಾಜರ ಕಾಲದಲ್ಲೇ ಅಲ್ಲಿ ಸುಮಾರು ಏಳು ಎಕರೆ ಜಾಗ ಕರ್ನಾಟಕಕ್ಕೆ ನೀಡಲಾಗಿತ್ತು” ಎಂದು ಹೇಳಿದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಕುಟುಂಬದ ಆರಾಧ್ಯ ದೇವರನ್ನು ತಿರುಪತಿಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ. ಇತ್ತೀಚಿನ ತಿರುಪತಿ ಭೇಟಿಯ ವೇಳೆ ಈ ವಿಚಾರ ಮನಸ್ಸಿಗೆ ಬಂದಿತ್ತು ಎಂದೂ ಅವರು ತಿಳಿಸಿದರು.
ದ್ವಾರಕಾನಾಥರ ಕುರಿತು ಸಿಎಂ ಮಾತು
ಸುಬ್ರಹ್ಮಣ್ಯ ದೇವಸ್ಥಾನ ನಿರ್ಮಾಣದ ಕನಸನ್ನು ದ್ವಾರಕಾನಾಥರು ಹಲವು ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದರು ಎಂದು ಶಿವಕುಮಾರ್ ಹೇಳಿದರು.
“ಸರಿಯಾದ ಸಮಯ ಬರುತ್ತದೆ ಎಂದು ನಾನು ಹೇಳಿದ್ದೆ. ಈಗ ಆ ಸಮಯ ಬಂದಿದೆ. ದ್ವಾರಕಾನಾಥರು ನನಗೆ ಗುರು ಸಮಾನರು. ಅವರು ಒಂದು ಭವಿಷ್ಯ ನುಡಿದಿದ್ದರು. ಅದನ್ನು ಈಗ ಹೇಳಿದರೆ ಅದು ದೊಡ್ಡ ಸುದ್ದಿಯಾಗುತ್ತದೆ” ಎಂದು ಅವರು ಹೇಳಿದರು.
‘ದೇವರು ಒಬ್ಬನೇ, ಹೆಸರುಗಳು ಹಲವು’
ಗಂಗಾಧರ ಅಜ್ಜಯ್ಯರ ಮಾತುಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಮಾನವ ಧರ್ಮ ದೈವಿಕವಾಗಿರಬೇಕು ಮತ್ತು ಲೋಕಕ್ಕೆ ಶಾಂತಿ ಧರ್ಮದಿಂದಲೇ ಸಾಧ್ಯ ಎಂದು ಹೇಳಿದರು.
“ಯಾವುದೇ ಪೂಜಾ ವಿಧಾನವಾಗಿರಲಿ, ಭಕ್ತಿ ಒಂದೇ. ಯಾವುದೇ ಕಾರ್ಯವಾಗಿರಲಿ, ನಿಷ್ಠೆ ಒಂದೇ. ದೇವರು ಒಬ್ಬನೇ, ಆದರೆ ಅವನಿಗೆ ಹಲವು ಹೆಸರುಗಳಿವೆ” ಎಂದು ತಿಳಿಸಿದರು.
ಸಿ.ವಿ. ಶಾಸ್ತ್ರಿಯವರು ತಮ್ಮನ್ನು ದ್ವಾರಕಾನಾಥರಿಗೆ ಪರಿಚಯಿಸಿದ್ದರು. ಸುಮಾರು 35ನೇ ವಯಸ್ಸಿನಿಂದಲೇ ಅವರ ಮಾರ್ಗದರ್ಶನದಲ್ಲಿ ಇದ್ದೇನೆ. ನಮ್ಮಿಬ್ಬರ ನಡುವಿನ ಎಲ್ಲಾ ಅನುಭವಗಳನ್ನು ಹೇಳಲು ಹೊರಟರೆ ಒಂದು ಇತಿಹಾಸ ಗ್ರಂಥವೇ ಬರೆಯಬಹುದು ಎಂದು ಶಿವಕುಮಾರ್ ಹೇಳಿದರು.
‘ಬೆದರಿಕೆಗಳಿಗೆ ದ್ವಾರಕಾನಾಥರು ಎಂದೂ ಹೆದರಲಿಲ್ಲ’
ದ್ವಾರಕಾನಾಥರು ಹಲವು ವರ್ಷಗಳಿಂದ ಟೀಕೆ ಹಾಗೂ ಬೆದರಿಕೆಗಳನ್ನು ಎದುರಿಸಿದ್ದರೂ ಎಂದಿಗೂ ಹಿಂದೆ ಸರಿಯಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
“ಕೆಲವು ಮಾಧ್ಯಮಗಳು ಅವರು ಡಿ ಕೆ ಶಿವಕುಮಾರ್ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದವು. ಕಳೆದ 25 ವರ್ಷಗಳಲ್ಲಿ ಅನೇಕ ಬಾರಿ ಬೆದರಿಕೆಗಳು ಬಂದರೂ ಅವರು ಹೆದರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್. ಎಂ. ಕೃಷ್ಣ ಮತ್ತು ಧರಂ ಸಿಂಗ್ ಸೇರಿದಂತೆ ಅನೇಕರು ಅವರ ಸಲಹೆಗಳನ್ನು ಪಡೆದಿದ್ದರು” ಎಂದು ಶಿವಕುಮಾರ್ ಹೇಳಿದರು.