ಬೆಂಗಳೂರು:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಸಂಘಟನೆಗಳು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದ್ದು, ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹಲವು ನಾಟಕೀಯ ತಿರುವುಗಳನ್ನು ಪಡೆದ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರಮುಖರ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಸರ್ಕಾರ ಹಲವು ಸುತ್ತಿನ ಮಾತುಕತೆ ನಂತರ ಅಂತಿಮವಾಗಿ ಮಷ್ಕರ ಕೈಬಿಡಲು ಸಾರಿಗೆ ಸಿಬ್ಬಂದಿ ಸಂಘಟನೆಗಳು ತೀರ್ಮಾನಿಸಿವೆ.
ಕಳೆದ ನಾಲ್ಕು ದಿನಗಳಿಂದ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಮುಷ್ಕರ ನಡೆಸುತ್ತಿದ್ದರು. ಇಂದು ಸರ್ಕಾರದಿಂದ ಬೇಡಿಕೆಗಳ ಈಡೇರಿಕೆಗೆ ಲಿಖಿತ ರೂಪದಲ್ಲಿ ಭರವಸೆ ದೊರೆತ ಹಿನ್ನೆಲೆಯಲ್ಲಿ ನೌಕರರು ಮುಷ್ಕರವನ್ನು ಹಿಂಪಡೆದಿದ್ದಾರೆ.
ಹತ್ತು ಬೇಡಿಕೆಗಳ ಪೈಕಿ ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರು ಮುಷ್ಕರವನ್ನು ಹಿಂಪಡೆದಿದ್ದಾರೆಂದು ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ, ಕೋವಿಡ್ ಸೋಂಕಿನಿಂದ ಮೃತಪಟ್ವ ನೌಕರರ ಕುಟುಂಬದವರಿಗೆ ೩೦ ಲಕ್ಷ ರೂಪಾಯಿ ಪರಿಹಾರ, ಅಂತರ್ ನಿಗಮ ವರ್ಗಾವಣೆ, ತರಬೇತಿ ಅವಧಿಯನ್ನು ೨ ವರ್ಷದಿಂದ ೧ ವರ್ಷಕ್ಕೆ ಕಡಿತ ಮಾಡುವುದೂ ಸೇರಿದಂತೆ ಚಾಲಕರಿಗೆ ವಿಶೇಷ ಭತ್ಯೆ, ಮೇಲಾಧಿಕಾರಿಗಳ ಕಿರುಕುಳ ತಡೆ ಸೇರಿದಂತೆ ನೌಕರರ ೯ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.
ರಸ್ತೆ ಸಾರಿಗೆ ನಿಗಮ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ, ಈ ಬಗ್ಗೆ ಆರ್ಥಿಕ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ನೌಕರರು ರಾಜ್ಯದ ಹಲವೆಡೆ ಕರ್ತವ್ಯಕ್ಕೆ ಹಾಜರಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಮುಷ್ಕರದ ನಾಲ್ಕನೇ ದಿನವಾದ ಇಂದು ಬೆಳಿಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ಕೆಲವೆಡೆ ಬಸ್ ಸಂಚಾರ ಆರಂಭಗೊಂಡಿತ್ತು. ಸಂಜೆ ವೇಳೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ೩೧೦, ಬೆಂಗಳೂರು ಮಹಾನಗರ ಸಾರಿಗೆ ನಿಗಮ ೨೧೧, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ೩೪೭ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ೨೬೯ ಬಸ್‌ಗಳು ಸಂಚಾರ ಆರಂಭಿಸಿತ್ತು. ಮೈಸೂರು, ರಾಯಚೂರು, ಚಿಕ್ಕಮಗಳೂರು ಹಾಗೂ ಕೊಪ್ಪಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನದ ವೇಳೆಗೆ ಭಾಗಶಃ ಬಸ್ ಸಂಚಾರ ಪುನರಾರಂಭಗೊಂಡಿತ್ತು.