2025-26ರ ಖಾರಿಫ್ ಮಾರುಕಟ್ಟೆ ಹಂಗಾಮಿನ ಸಿರಿಧಾನ್ಯ ಖರೀದಿಯಲ್ಲಿ ಕರ್ನಾಟಕಕ್ಕೆ ‘ಎಕ್ಸಲೆನ್ಸ್ ಅವಾರ್ಡ್’
ಬೆಂಗಳೂರು: 2025-26ರ ಖಾರಿಫ್ ಮಾರುಕಟ್ಟೆ ಹಂಗಾಮಿನಲ್ಲಿ (KMS) ಶ್ರೀ ಅನ್ನ (ಸಿರಿಧಾನ್ಯ) ಖರೀದಿಯಲ್ಲಿ ಸಾಧಿಸಿದ ಕಾರ್ಯಕ್ಷಮತೆಗಾಗಿ ಕರ್ನಾಟಕಕ್ಕೆ ‘ಎಕ್ಸಲೆನ್ಸ್ ಅವಾರ್ಡ್’ ಲಭಿಸಿದೆ.
ಬುಧವಾರ ನಡೆದ ರಾಜ್ಯ ಆಹಾರ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಸಿರಿಧಾನ್ಯ ಖರೀದಿಯಲ್ಲಿ ಕರ್ನಾಟಕದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯದಲ್ಲಿ ಸಿರಿಧಾನ್ಯಗಳು ಹಾಗೂ ಇತರ ಕಿರುಧಾನ್ಯಗಳ ಖರೀದಿ ವ್ಯವಸ್ಥೆಯನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಮತ್ತು ಆಹಾರ ಇಲಾಖೆ ಕೈಗೊಂಡಿರುವ ನಿರಂತರ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ಮಾನ್ಯತೆ ದೊರೆತಿದೆ.
ಕರ್ನಾಟಕ ಆಹಾರ ಇಲಾಖೆಯ ತಂಡವನ್ನು ಅಭಿನಂದಿಸಿರುವ ಸರ್ಕಾರ, ಸಿರಿಧಾನ್ಯ ಖರೀದಿಯನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಇಲಾಖೆ ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಈ ಪ್ರಶಸ್ತಿ ಮಹತ್ವದ ಮಾನ್ಯತೆಯಾಗಿದೆ ಎಂದು ತಿಳಿಸಿದೆ.
