ಬೆಂಗಳೂರು:
ವೈದ್ಯಕೀಯ ಶಿಕ್ಷಣದಲ್ಲಿ ಹಿಂದುಳಿದ ವರ್ಗ (ಒಬಿಸಿ) ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕಲ್ಪಿಸಲು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೇ ದಿಟ್ಟಹೆಜ್ಜೆ ಎಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಮಾಜಿ ಸಚಿವರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥಣಾರಾಯಣ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿರುವ ಈ ನಿರ್ಧಾರ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ ಹಾಗೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಎಲ್ಲ ಹಂತದ ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
PM Shri @narendramodi led Govt has done a commendable job by taking the historic decision of providing 27% & 10% reservation in medical, dental courses to OBCs and EWS respectively.
— Dr. Ashwathnarayan C. N. (@drashwathcn) July 29, 2021
Many congratulations to @PMOIndia for this landmark decision. pic.twitter.com/MTFUHof5Mo
ಒಬಿಸಿ ಕೋಟಾದಲ್ಲಿ 27% ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲು ಕಲ್ಪಿಸುವುದು ಸುಲಭದ ಮಾತಲ್ಲ. ಅದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ಮೋದಿ ಅವರಲ್ಲಿ ಅಂತಹ ಬಲವಾದ ಇಚ್ಛಾಶಕ್ತಿ ಇರುವ ಕಾರಣಕ್ಕೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಇಂಥ ಅತ್ಯುತ್ತಮ ನಿರ್ಧಾರ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಈ ನಿರ್ಧಾರದಿಂದ ಪ್ರತಿವರ್ಷವೂ 1,500 ಒಬಿಸಿ ಅಭ್ಯರ್ಥಿಗಳಿಗೆ ಎಂಬಿಬಿಎಸ್ ನಲ್ಲಿ, 2,500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರದಲ್ಲಿ ಹಾಗೂ 550 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, 1000 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ʼಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಡಾ.ಅಶ್ವತ್ಥನಾರಾಯಣ ಹೆಳಿದ್ದಾರೆ.