Home ಬೆಳಗಾವಿ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ದ್ವಯರು

ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ದ್ವಯರು

24
0
Karnataka's two ministers inspects Smart City works in Vaccine Depot premises in Belagavi
Karnataka's two ministers inspects Smart City works in Vaccine Depot premises in Belagavi

ಬೆಳಗಾವಿ:

ಬೆಳಗಾವಿಯ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ರಾಜ್ಯ ಲೋಕೋಪಯೋಗಿ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ವೀಕ್ಷಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಿಂದ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಅಕ್ರಮವಾಗಿ ಕಾಮಗಾರಿಗಳು ನಡೆಯುತ್ತಿವೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ಇಬ್ಬರು ಸಚಿವರು, ಕಾಮಗಾರಿಗಳ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

2

ಆರೋಗ್ಯ ಇಲಾಖೆಯ ಪೂರ್ವಾನುಮತಿ ಪಡೆಯದೆ ಕಾಮಗಾರಿ ನಡೆಸಲಾಗಿದೆ ಎನ್ನುವ ಕಾರಣಕ್ಕಾಗಿ ಆರೋಗ್ಯಾಧಿಕಾರಿಗಳು ಈ ಸಂಬಂಧ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು. ಮನಸ್ಸಿಗೆ ಬಂದಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸತೀಶ್ ಜಾರಕಿಹೊಳಿ ಈ ಸಂದರ್ಭದಲ್ಲಿ ಹೇಳಿದರು.

ಟಿಳಕವಾಡಿ ವ್ಯಾಕ್ಸಿನ ಡಿಪೋವನ್ನು ಯಥಾಸ್ಥಿತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಇದು ಐತಿಹಾಸಿಕ ಲಸಿಕಾ ಸಂಸ್ಥೆಯಾಗಿತ್ತು. ೨೦೦೬ರಲ್ಲಿ ಇದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸ್ಮಾರ್ಟಸಿಟಿ ಕಾಮಗಾರಿಗಳನ್ನು ಆರೋಗ್ಯ ಇಲಾಖೆ ಗಮನಕ್ಕೆ ತಾರದೇ ಕೈಗೊಳ್ಳಲಾಗಿದೆ. ಇಲ್ಲಿನ ಔಷಧಿಯುಕ್ತ ಮರಗಳನ್ನು ಕಡಿದು ಸಾಗಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಸ್ಮಾರ್ಟಸಿಟಿ ಎಂಡಿ ವಿರುದ್ಧ ದೂರು ನೀಡಿರುವುದು ಆಶ್ಚರ್ಯವಾಗಿದೆ ಎಂದರು.

3

ಈಗಾಗಲೇ ಸ್ಮಾರ್ಟಸಿಟಿ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಇದಕ್ಕೆ ಕೊನೆಹಾಡಬೇಕಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಾರೆ. ಈ ಪ್ರಕರಣ ನ್ಯಾಯಾಲಯಕ್ಕೂ ಹೋಗಿದೆ. ಈ ಕುರಿತು ನಾವು ಮಾಹಿತಿ ಪಡೆದಿದ್ದೇವೆ. ಪೊಲೀಸ್ ತನಿಖೆಯಿಂದ ಸತ್ಯಾಂಶ ಕಂಡುಹಿಡಿಯಬೇಕಿದೆ. ತನಿಖೆ ಆಧಾರದ ಮೇಲೆ ಆಯಾ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ರಾಜಕೀಯ ವ್ಯವಸ್ಥೆ ಒತ್ತಡ ಇರಬಹುದು. ಮಾಹಿತಿ ಹಕ್ಕಿನಡಿ ಕೆಲವರು ಅರ್ಜಿ ಸಲ್ಲಿಸಿದ್ದರು. ಈಗ ಜಿಲ್ಲಾ ಆರೋಗ್ಯಾಧಿಕಾರಿ ಅನಿವಾರ್ಯವಾಗಿ ಠಾಣೆಗೆ ದೂರು ಕೊಟ್ಟಿದ್ದಾರೆ. ಸ್ಮಾರ್ಟಸಿಟಿ ಯೋಜನೆಯಡಿ ವ್ಯಾಕ್ಸಿನ್ ಡಿಪೋ ವ್ಯಾಪ್ತಿಯಲ್ಲಿ ಫುಟ್ಫಾತ್, ಕಟ್ಟಡ ನಿರ್ಮಿಸಲಾಗಿದೆ. ಇನ್ನು ೯ ಕೋಟಿ ಕಾಮಗಾರಿ ಬಾಕಿ ಇದೆ ಎಂದರು.
ವ್ಯಾಕ್ಸಿನ ಡಿಪೋವನ್ನು ಯಥಾಸ್ಥಿತಿ ಕಾಪಾಡುವುದರ ಜೊತೆಗೆ ಈ ಸಂಬಂಧ ಸ್ಮಾರ್ಟಸಿಟಿ, ಆರೋಗ್ಯ ಇಲಾಖೆ, ಜಿಲ್ಲಾಧಿಕಾರಿ ಜೊತೆಗೆ ಸಭೆ ನಡಿಸಿ, ಪರಿಹಾರ ಕಂಡುಕೊಳ್ಳಬೇಕಿದೆ. ಅಲ್ಲದೇ, ವ್ಯಾಕ್ಸಿನ ಡಿಪೋದ ವ್ಯಾಪ್ತಿಯಲ್ಲಿನ ಔಷಧಿಯುಕ್ತ ಗಿಡಮರಗಳನ್ನು ಕಡಿದು ಹಾನಿಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶಾಸಕರಾದ ರಾಜು (ಆಸೀಫ್) ಸೇಠ್, ಬಾಬಾಸಾಹೇಬ್ ಪಾಟೀಲ, ಮೃಣಾಲ ಹೆಬ್ಬಾಳಕರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here