ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಸಾಧನೆ: ಸತ್ವೀರ್ ರೊಟ್ಟಿ ಮತ್ತು ಪುತ್ರರಿಗೆ ಕ್ರೀಡಾ ಆಯುಕ್ತ ಅನುಚೇತ್ ಸನ್ಮಾನ
ಬೆಂಗಳೂರು: ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಶಸ್ವಿಯಾಗಿ ಸೈಕ್ಲಿಂಗ್ ನಡೆಸುವ ಮೂಲಕ ಅಪರೂಪದ ಸಾಧನೆಗೈದ ಪ್ರಸಿದ್ಧ ಉದ್ಯಮಿ ಸತ್ವೀರ್ ರೊಟ್ಟಿ ಹಾಗೂ ಅವರ ಪುತ್ರರಾದ ವಿನಯ್ ರೊಟ್ಟಿ ಮತ್ತು ಸುಮಂತ್ ರೊಟ್ಟಿ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಅನುಚೇತ್ ಸನ್ಮಾನಿಸಿ ಅಭಿನಂದಿಸಿದರು.
ದೇಶದ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೆ ಸೈಕಲ್ ಚಲಾಯಿಸಿದ ರೊಟ್ಟಿ ಕುಟುಂಬದ ಸಾಹಸಯಾತ್ರೆಯನ್ನು ಅನುಚೇತ್ ಪ್ರಶಂಸಿಸಿದರು. ಈ ಸಾಧನೆಯು ಅವರ ದೈಹಿಕ ಸಾಮರ್ಥ್ಯ, ಮನೋಬಲ ಮತ್ತು ಶಿಸ್ತನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಇಂತಹ ಸಾಹಸಿಕ ಪ್ರಯತ್ನಗಳು ಯುವಜನರಲ್ಲಿ ದೈಹಿಕ ಫಿಟ್ನೆಸ್ ಹಾಗೂ ಕ್ರೀಡಾ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಲು ದೊಡ್ಡ ಮಟ್ಟದ ಪ್ರೇರಣೆಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಗಿರೀಶ್ ಎಲ್.ಪಿ. ಉಪಸ್ಥಿತರಿದ್ದರು.
