KEA ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ 2026: ಸೆಪ್ಟೆಂಬರ್ 7ರಿಂದ ಎರಡನೇ ಸುತ್ತಿನ ಸೀಟು ಹಂಚಿಕೆ; ಸೆಪ್ಟೆಂಬರ್ 9ರವರೆಗೆ ಆಯ್ಕೆ ದಾಖಲಿಸಲು ಅವಕಾಶ
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 7ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಚಾಯ್ಸ್ 2 ಅಥವಾ ಚಾಯ್ಸ್ 3 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಹಾಗೂ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UGCET ಎರಡನೇ ಸುತ್ತಿನ ಬಳಿಕ ಚಾಯ್ಸ್ 4 ಆಯ್ಕೆ ಮಾಡಿಕೊಂಡು ಹೊರಬಂದ ಅಭ್ಯರ್ಥಿಗಳೂ ವೈದ್ಯಕೀಯ ಅಥವಾ ದಂತ ವೈದ್ಯಕೀಯ ಆಯ್ಕೆಗಳನ್ನು ಹೊಂದಿದ್ದರೆ ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದ್ದಾರೆ.
ಅರ್ಹ ಅಭ್ಯರ್ಥಿಗಳು ಪೋರ್ಟಲ್ಗೆ ಲಾಗಿನ್ ಮಾಡಿ ಸೆಪ್ಟೆಂಬರ್ 7ರ ಮಧ್ಯಾಹ್ನ 2 ಗಂಟೆಯಿಂದ ಸೆಪ್ಟೆಂಬರ್ 9ರ ಮಧ್ಯಾಹ್ನ 2 ಗಂಟೆಯವರೆಗೆ ತಮ್ಮ ಆಯ್ಕೆಗಳನ್ನು ದಾಖಲಿಸಿ ಸೇವ್ ಮಾಡಬೇಕು.
ಆಯ್ಕೆ ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.
ಎರಡನೇ ಸುತ್ತಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆಯ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು KEA ವೆಬ್ಸೈಟ್ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
